ವಿಷಾನಿಲ ಸೋರಿಕೆ: ನಷ್ಟ ಪರಿಹಾರಕ್ಕೆ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆಗ್ರಹ

ಬೆಂಗಳೂರು, ಮೇ 14: ಮಂಡ್ಯ ಜಿಲ್ಲೆಯ ಬಸರಾಳು ಹೋಬಳಿಯ ಕಾರೇಕಟ್ಟೆ ಗ್ರಾಮದಲ್ಲಿ ಕೀರ್ತಿ ರಾಸಾಯನಿಕ ಕಾರ್ಖಾನೆಯ ವಿμÁನಿಲ ಸೋರಿಕೆ ಸಂಬಂಧ ರೈತರಿಗೆ ಪರಿಹಾರ ನೀಡುವ ಕುರಿತು ಜಂಟಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಮಂಡ್ಯ ಜಿಲ್ಲಾಧಿಕಾರಿ ಸೂಚನೆ ನೀಡಿದ್ದು, ನಷ್ಟಕ್ಕೆ ಒಳಗಾಗಿರುವ ರೈತರಿಗೆ ಪರಿಹಾರ ನೀಡಬೇಕೆಂದು ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಆಗ್ರಹಿಸಿದ್ದಾರೆ.
ಜನವರಿ 15ರಂದು ರಾಸಾಯನಿಕ ತಯಾರಿಕಾ ಘಟಕದಿಂದ ವಿಷಾನಿಲ ಸೋರಿಕೆಯಾಗಿ ಸುತ್ತಮುತ್ತಲ ಗ್ರಾಮಗಳ ಸುಮಾರು 15 ಎಕರೆ ಜಮೀನು ಹಾಗೂ ಅರಣ್ಯ ಇಲಾಖೆಗೆ ಸೇರಿದ 20 ಎಕರೆ ಅರಣ್ಯ ಪ್ರದೇಶ ಹಾನಿಗೊಳಪಟ್ಟಿದ್ದು, ಇದರಲ್ಲಿ ರೈತರು ಬೆಳೆದ ನೂರಾರು ತೆಂಗಿನ ಮರಗಳು, ಟೊಮ್ಯಾಟೋ, ರಾಗಿ, ಹುರಳಿ ಬೆಳೆಗಳು ಸಂಪೂರ್ಣ ನಾಶವಾಗಿದೆ. ಆದರೆ, ಈ ಬಗ್ಗೆ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲ. ರೈತರಿಗೆ ಆದ ನಷ್ಟವನ್ನು ಕೂಡಲೇ ಭರಿಸಿಕೊಡಬೇಕು ಎಂದು ಸಿಎಂ, ಸಿಎಸ್‍ಗೆ, ದಿನೇಶ್ ಮನವಿ ಮಾಡಿದ್ದಾರೆ.
ವಿಷಾನಿಲ ಸೋರಿಕೆ ಪ್ರಕರಣ ಸಂಬಂಧ ಆದೇಶ ಹೊರಡಿಸಿರುವ ಮಂಡ್ಯ ಜಿಲ್ಲಾಧಿಕಾರಿ, ವಿಷಾನಿಲ ಸೋರಿಕೆಯಾಗಿ ಬೆಳೆ ನಾಶವಾಗಿರುವ ಸಂತ್ರಸ್ತ ರೈತರಿಗೆ ಪರಿಹಾರ ನೀಡುವ ಸಂಬಂಧ ಜಂಟಿ ಸಮೀಕ್ಷೆ ನಡೆಸಿ ಕೂಲಂಕಷವಾಗಿ ಪರಿಶೀಲನೆ ನಡೆಸಿ, ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳುವುದು. ಜೊತೆಗೆ ಕೈಗೊಂಡ ಕ್ರಮದ ಬಗ್ಗೆ ವರದಿಯನ್ನು ಮಂಡ್ಯ ತಹಸಿಲ್ದಾರ್ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಒಂದು ವಾರದ ಒಳಗೆ ಸಲ್ಲಿಸಲು ಸೂಚಿಸಿ ಆದೇಶವನ್ನು ಹೊರಡಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.







