ಶ್ರೀಲಂಕಾ: 12 ಗಂಟೆ ಕರ್ಫ್ಯೂ ಸಡಿಲಿಕೆ ; ಸಚಿವ ಸಂಪುಟ ರಚನೆಗೆ ಪ್ರಧಾನಿ ಸಿದ್ಧತೆ
ಕೊಲಂಬೊ, ಮೇ 14: ದಿವಾಳಿಯಾಗುವ ಅಪಾಯ ಎದುರಿಸುತ್ತಿರುವ ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಸರಕಾರ ವಿರೋಧಿ ಪ್ರತಿಭಟನೆ ಮತ್ತು ಆ ಬಳಿಕದ ಹಿಂಸಾಚಾರದ ಹಿನ್ನೆಲೆಯಲ್ಲಿ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಶನಿವಾರ 12 ಗಂಟೆ ಸಡಿಲಿಸಲಾಗಿದೆ ಎಂದು ವರದಿಯಾಗಿದೆ.
ಈ ಮಧ್ಯೆ, ನೂತನ ಪ್ರಧಾನಿಯಾಗಿ ನೇಮಕಗೊಂಡಿರುವ ರಣಿಲ್ ವಿಕ್ರಮಸಿಂಘೆ ಸಚಿವ ಸಂಪುಟ ರಚನೆಗೆ ಮುಂದಾಗಿದ್ದಾರೆ. ಆದರೆ ತಾವು ಸರಕಾರದ ಭಾಗಿಯಾಗುವುದಿಲ್ಲ ಎಂದು ಬಹುತೇಕ ವಿಪಕ್ಷಗಳು ಘೋಷಿಸಿದ್ದರೂ, ದೇಶದ ಅರ್ಥವ್ಯವಸ್ಥೆ ಶೀಘ್ರ ಚೇತರಿಸಿಕೊಳ್ಳಬೇಕೆಂಬ ಉದ್ದೇಶದಿಂದ ಪ್ರಧಾನಿಯ ಆರ್ಥಿಕ ನೀತಿಗೆ ಬಾಹ್ಯ ಬೆಂಬಲ ನೀಡುವುದಾಗಿ ಹೇಳಿವೆ.
ದೇಶ ಎದುರಿಸುತ್ತಿರುವ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿಗೆ ರಾಜಪಕ್ಸ ನೇತೃತ್ವದ ಸರಕಾರದ ಅದಕ್ಷತೆ ಕಾರಣ ಎಂದು ಆಕ್ರೋಶಗೊಂಡ ಜನತೆ ಸರಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾಕಾರರ ಮೇಲೆ ಸರಕಾರದ ಬೆಂಬಲಿಗರ ತಂಡ ದಾಳಿ ನಡೆಸಿ ದಾಂಧಲೆ ನಡೆಸಿದ್ದರಿಂದ ದೇಶದೆಲ್ಲೆಡೆ ಹಿಂಸಾಚಾರ ಭುಗಿಲೆದ್ದಿತ್ತು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಪ್ರಧಾನಿ ಮಹಿಂದಾ ರಾಜಪಕ್ಸ ರಾಜೀನಾಮೆ ನೀಡಿದ ಬಳಿಕ ಮಾಜಿ ಪ್ರಧಾನಿ ರಣಿಲ್ ವಿಕ್ರಮಸಿಂಘೆಯನ್ನು ಪ್ರಧಾನಿಯಾಗಿ ನೇಮಕಗೊಳಿಸಲಾಗಿದೆ.
ಐದು ಬಾರಿ ಪ್ರಧಾನಿಯಾಗಿದ್ದ ವಿಕ್ರಮಸಿಂಘೆ, ಮಂಗಳವಾರ ಸಂಸತ್ ಕಲಾಪ ಆರಂಭಕ್ಕೂ ಮುನ್ನ ಸಂಪುಟ ಸದಸ್ಯರ ನೇಮಕಕ್ಕೆ ಚಾಲನೆ ನೀಡುವ ನಿರೀಕ್ಷೆಯಿದೆ. ಯುನೈಟೆಡ್ ನ್ಯಾಷನಲ್ ಪಕ್ಷದ ಏಕೈಕ ಸಂಸತ್ ಸದಸ್ಯನಾಗಿರುವ ವಿಕ್ರಮಸಿಂಘೆ, ಈಗ ಸಮ್ಮಿಶ್ರ ಸರಕಾರ ಸ್ಥಾಪನೆಗೆ ಇತರ ಪಕ್ಷಗಳ ಬೆಂಬಲ ಕ್ರೋಢೀಕರಿಸಬೇಕಿದೆ. ರಾಜಪಕ್ಸರ ಶ್ರೀಲಂಕಾ ಪೊದುಜನ ಪೆರಮುನ ಪಕ್ಷವು ವಿಕ್ರಮಸಿಂಘೆಯನ್ನು ಬೆಂಬಲಿಸುವುದಾಗಿ ವಾಗ್ದಾನ ಮಾಡಿದೆ.