ಮಗಳನ್ನು ಸಾಕಲು 30 ವರ್ಷ ಪುರುಷನಂತೆ ವೇಷ ಧರಿಸಿ ಬದುಕಿದ ತಮಿಳುನಾಡಿನ ಮಹಿಳೆ

Photo: twitter/Tushar_KN
ಚೆನ್ನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ಮಹಿಳೆಯೊಬ್ಬರು ತನ್ನ ಮಗಳನ್ನು ಒಂಟಿಯಾಗಿ ಬೆಳೆಸಲು 30 ವರ್ಷಗಳ ಕಾಲ ಪುರುಷನ ವೇಷ ಧರಿಸಿ ಸುದ್ದಿಯಾಗಿದ್ದಾರೆ.
ಮೂರು ದಶಕಗಳ ಹಿಂದೆ, ತೂತುಕುಡಿಯ ಕಾಟುನಾಯಕನಪಟ್ಟಿ ಗ್ರಾಮದ 20 ವರ್ಷದ ಪೇಚಿಯಮ್ಮಳ್ ಅವರು ಮದುವೆಯಾದ 15 ದಿನಗಳಲ್ಲಿ ತನ್ನ ಪತಿಯನ್ನು ಕಳೆದುಕೊಂಡಿದ್ದರು. ಅವರ ಪತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಆದರೆ, ಅದಾಗಲೇ ಪೇಚಿಯಮ್ಮಲ್ ಗರ್ಭದಲ್ಲಿ ಭ್ರೂಣ ತಾಳಿತ್ತು. ಬಳಿಕ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆ ಮಗುವಿಗಾಗಿ, ಪೆಚ್ಚಿಯಮ್ಮಲ್ ಕೆಲಸ ಮಾಡಲು ಪ್ರಾರಂಭಿಸಿದ್ದಾರೆ. ಆದರೆ, ಕೆಲಸ ಮಾಡುವ ಕಡೆಯಲ್ಲಿ ಕಿರುಕುಳವನ್ನು ಎದುರಿಸಿದ್ದಾರೆ. ಇದರಿಂದ ಬೇಸತ್ತ ಅವರು, ಮರುಮದುವೆಯಾಗದೆ ತನ್ನ ಮಗಳನ್ನು ಸಾಕಲು ಪುರುಷ ವೇಷ ಹಾಕಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ತನ್ನ ಕೂದಲನ್ನು ಕ್ರಾಪ್ ಮಾಡಿ ಲುಂಗಿ ಮತ್ತು ಶರ್ಟ್ ಧರಿಸಿ ಗಂಡಸಿನಂತೆ ವೇಷ ಧರಿಸಿ ಪೇಚಿಯಮ್ಮಳ್, ಕಳೆದ ಮೂರು ದಶಕಗಳಲ್ಲಿ ಮುತ್ತು ಹೆಸರಿನಲ್ಲಿ ವಿವಿಧೆಡೆ ಕೆಲಸ ಮಾಡಿದ್ದಾರೆ. ಚೆನ್ನೈ ಮತ್ತು ತೂತುಕುಡಿಯ ಹೋಟೆಲ್ಗಳು, ಟೀ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಮುತ್ತು ಹೆಸರಿನಲ್ಲಿ ಕೆಲಸ ಮಾಡಿದ್ದಾರೆ.
ಮುತ್ತುವಾಗಿ ಪರೋಟಾ ಮತ್ತು ಟೀ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಅವರನ್ನು ನಂತರ 'ಮುತ್ತು ಮಾಸ್ಟರ್' ಎಂದು ಕರೆಯಲಾಗುತ್ತಿತ್ತು.
“ನಾನು ಪೇಂಟರ್, ಟೀ ಮಾಸ್ಟರ್, ಪರೋಟಾ ಮಾಸ್ಟರ್ ಕೆಲಸದಿಂದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿದ್ದೇನೆ. ನನ್ನ ಮಗಳಿಗೆ ಸುರಕ್ಷಿತ ಜೀವನವನ್ನು ಖಚಿತಪಡಿಸಿಕೊಳ್ಳಲು ನಾನು ಪ್ರತಿ ಪೈಸೆಯನ್ನೂ ಉಳಿಸಿದೆ. ದಿನಗಳ ನಂತರ, ಮುತ್ತು ನನ್ನ ಗುರುತಾಗಿ ಬದಲಾಯಿತು, ಅದು ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಎಲ್ಲಾ ದಾಖಲೆಗಳಲ್ಲಿ ಮುತ್ತು ಎಂದೇ ಉಲ್ಲೇಖಿಸಲ್ಪಟ್ಟಿದೆ.” ಎಂದು ಪೇಚಿಯಮ್ಮಳ್ ಹೇಳಿದ್ದಾರೆ.
ಆರಂಭದಲ್ಲಿ ಇದು ಕಠಿಣವಾಗಿತ್ತು ಎಂದ ಪೇಚಿಯಮ್ಮಳ್ “ನನ್ನ ಮಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ನಾನು ತೊಂದರೆ ಅನುಭವಿಸಲು ಸಿದ್ದಗೊಂಡಿದ್ದೆ. ನನ್ನ ಜೀವನೋಪಾಯಕ್ಕಾಗಿ ನಾನು ಹೆಚ್ಚು ಪ್ರಯಾಣಿಸುತ್ತಿದ್ದ ಸಮಯದಲ್ಲಿ ಪುರುಷನ ವೇಷವು ನನ್ನ ಕೆಲಸದ ಸ್ಥಳದಲ್ಲಿ ನನ್ನನ್ನು ಸುರಕ್ಷಿತವಾಗಿರಿಸಿತು. ನನ್ನ ಗುರುತನ್ನು ನಿಜವಾಗಿಸಲು, ನಾನು ಯಾವಾಗಲೂ ಬಸ್ಗಳಲ್ಲಿ ಪುರುಷರ ಬದಿಯಲ್ಲಿ ಮಾತ್ರ ಕುಳಿತುಕೊಂಡಿದ್ದೇನೆ. ನಾನು ಪುರುಷರ ಶೌಚಾಲಯವನ್ನು ಬಳಸಿದ್ದೇನೆ. ಬಸ್ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಸರ್ಕಾರ ಘೋಷಿಸಿದ್ದರೂ, ನಾನು ಪ್ರಯಾಣ ದರವನ್ನು ಪಾವತಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ಅದಾಗ್ಯೂ, 57ರ ಹರೆಯದ ಪೇಚಿಯಮ್ಮಾಳ್ ಈಗ ನೆಮ್ಮದಿಯ ಬದುಕು ಬಾಳುತ್ತಿದ್ದಾರೆ. “ನನ್ನ ಮಗಳು ಮದುವೆಯಾಗಿದ್ದಾಳೆ ಮತ್ತು ನನ್ನ ಎಲ್ಲಾ ಆಸೆಗಳನ್ನು ನಾನು ಪೂರೈಸಿದ್ದೇನೆ ಎಂದು ನಾನು ಭಾವಿಸುತ್ತೇನೆ. ನನ್ನ ಸಾವಿನ ನಂತರವೂ ನಾನು ಮುತ್ತುವಾಗಿ ನೆನಪಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಸರ್ಕಾರದಿಂದ ಪಿಂಚಣಿ ಸಿಕ್ಕರೆ ನನ್ನ ಉಳಿದ ಜೀವನವನ್ನು ಗಂಡಸಿನಂತೆಯೇ ಕಳೆಯುತ್ತೇನೆ. ನಾನು ಅನೇಕ ಯೋಜನೆಗಳಿಗೆ ಅನರ್ಹಳಾಗಿದ್ದೇನೆ,” ಎಂದು ಅವರು ಹೇಳಿದ್ದಾರೆ.
"Disguising as a man kept me safer at my workplace...," said Pechiyammal, who disguised herself as a man for 30 years to raise her daughter singlehandedly.
— Arpita Raj (@rjarpitaa) May 13, 2022
"I'm ineligible for many schemes," she said. She is now 57-year-old. @CMOTamilnadu @mkstalinhttps://t.co/8W31NY5nuB







