ಪತ್ರಕರ್ತೆ ಶಿರೀನ್ ಅಂತ್ಯಕ್ರಿಯೆ ಮೆರವಣಿಗೆ ಮೇಲೆ ದಾಳಿ : ಇಸ್ರೇಲ್ ಪೊಲೀಸರ ಕೃತ್ಯಕ್ಕೆ ಜಾಗತಿಕ ಆಕ್ರೋಶ
photo courtesy:twitter/@NadaAbd96012896
ಜೆರುಸಲೇಂ, ಮೇ 14: ಇಸ್ರೇಲ್ ಪೊಲೀಸರ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೆಲೆಸ್ತೀನ್ ಪತ್ರಕರ್ತೆ ಶಿರೀನ್ರ ಅಂತ್ರಕ್ರಿಯೆಯ ಮೆರವಣಿಗೆ ಮೇಲೆ ಇಸ್ರೇಲ್ ಪೊಲೀಸರು ನಡೆಸಿದ ಕಾರ್ಯಾಚರಣೆಯ ವಿರುದ್ಧ ಅಮೆರಿಕ, ಯುರೋಪಿಯನ್ ಒಕ್ಕೂಟದ ನೇತೃತ್ವದಲ್ಲಿ ಜಾಗತಿಕ ಆಕ್ರೋಶ ವ್ಯಕ್ತವಾಗಿದೆ.
ಜೆರುಸಲೇಂನ ಓಲ್ಡ್ಸಿಟಿಯಲ್ಲಿ ನಡೆದ ಶಿರೀನ್ ಅಂತ್ಯಸಂಸ್ಕಾರದಲ್ಲಿ ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಅಂತ್ಯಕ್ರಿಯೆ ಮೆರವಣಿಗೆ ಸಂದರ್ಭ ಮೃತದೇಹಕ್ಕೆ ಹೆಗಲು ನೀಡಿದವರ ಮೇಲೆ ಲಾಠಿಚಾರ್ಜ್ ನಡೆಸಲು ಮುಂದಾದಾಗ ಕಾಫಿನ್ ನೆಲಕ್ಕೆ ಬೀಳುವ ಸಾಧ್ಯತೆಯಿತ್ತು. ಜನರಿಂದ ಫೆಲೆಸ್ತೀನ್ ಧ್ವಜವನ್ನು ಕಿತ್ತುಕೊಳ್ಳಲು ಪೊಲೀಸರು ಪ್ರಯತ್ನಿಸಿದರು. ಈ ಕುರಿತ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೆರಿಕ, ಈ ವರದಿಯಿಂದ ತೀವ್ರ ನೋವಾಗಿದೆ ಎಂದಿದೆ. ಅನಗತ್ಯ ಬಲಪ್ರಯೋಗಿಸಿದ ಇಸ್ರೇಲ್ ಪೊಲೀಸರ ಕ್ರಮದಿಂದ ಆಘಾತವಾಗಿದೆ ಎಂದು ಯುರೋಪಿಯನ್ ಯೂನಿಯನ್ ಹೇಳಿದೆ. ಪೊಲೀಸರ ಬಲಪ್ರಯೋಗದಿಂದ 33 ಮಂದಿ ಗಾಯಗೊಂಡಿದ್ದು ಇವರಲ್ಲಿ 6 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜೆರುಸಲೇಂ ರೆಡ್ ಕ್ರೆಸೆಂಟ್ ಹೇಳಿದೆ. ಅಂತ್ಯಕ್ರಿಯೆ ಮೆರವಣಿಗೆಯ ಸಂದರ್ಭ ಪೊಲೀಸರತ್ತ ಕಲ್ಲು ಮತ್ತು ಗಾಜಿನ ಬಾಟಲಿಗಳನ್ನು ಎಸೆದ 6 ಮಂದಿಯನ್ನು ಬಂಧಿಸಿರುವುದಾಗಿ ಇಸ್ರೇಲ್ ಅಧಿಕಾರಿಗಳು ಹೇಳಿದ್ದಾರೆ.
ಮೇ 11ರಂದು ಗುಂಡೇಟಿನಿಂದ ಮೃತಪಟ್ಟಿದ್ದ ಅಲ್ಜಝೀರಾದ ಪತ್ರಕರ್ತೆ ಶಿರೀನ್ ಸಾವಿಗೆ ಇಸ್ರೇಲ್ ಮತ್ತು ಪೆಲೆಸ್ತೀನ್ ಪರಸ್ಪರ ದೋಷಾರೋಪಣೆ ಮಾಡಿವೆ. ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಸೇನಾ ಕವಾಯತಿನ ಸಂದರ್ಭ ಶಿರೀನ್ ಮೇಲೆ ಗುಂಡುಹಾರಿಸಿದ್ದು ಇಸ್ರೇಲ್ ಯೋಧರೇ ಅಥವಾ ಪೆಲೆಸ್ತೀನೀಯರೇ ಎಂಬುದನ್ನು ಆರಂಭಿಕ ತನಿಖೆಯಲ್ಲಿ ದೃಢಪಡಿಸಲು ಸಾಧ್ಯವಾಗಿಲ್ಲ ಎಂದು ಇಸ್ರೇಲ್ ಶುಕ್ರವಾರ ಹೇಳಿದೆ. ಆದರೆ ಶಿರೀನ್ ಹತ್ಯೆಗೆ ಇಸ್ರೇಲ್ ಪೊಲೀಸರು ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿರುವುದಾಗಿ ಪಶ್ಚಿಮದಂಡೆಯ ರಮಲ್ಲಾದಲ್ಲಿನ ಪೆಲೆಸ್ತೀನ್ ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ. ಶಿರೀನ್ರನ್ನು ಇಸ್ರೇಲ್ ಉದ್ದೇಶಪೂರ್ವಕವಾಗಿ ಹತ್ಯೆಗೈದಿದೆ ಎಂದು ಅಲ್ಜಝೀರಾ ಹೇಳಿದೆ.
ಈ ಮಧ್ಯೆ, ಶಿರೀನ್ ಹತ್ಯೆಯನ್ನು ಖಂಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಸಮಿತಿ, ಹತ್ಯೆಯ ಬಗ್ಗೆ ತಕ್ಷಣವೇ, ಪಾರದರ್ಶಕ, ಸಂಪೂರ್ಣ ಮತ್ತು ನಿಷ್ಪಕ್ಷಪಾತ ತನಿಖೆ ನಡೆಯಬೇಕು ಎಂದು ಕರೆ ನೀಡಿದೆ.
Shirin Abu Aqila's coffin fell as a result of Israeli occupation soldiers assaulting those carrying the coffin#ShireenAbuAqla #شيرين_ابو_عاقلة pic.twitter.com/EN6W5Q1wXt
— Nada Abdou (@NadaAbd96012896) May 13, 2022