ಶಿಕ್ಷಣದ ಮೂಲಕ ಸೌಹಾರ್ದತೆ ಮೂಡಿಸಲು ವಿದ್ಯಾರ್ಥಿಗಳು ಮುಂದಾಗಬೇಕು: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಬೆಂಗಳೂರು, ಮೇ, 14: ‘ಸೌಹಾರ್ದತೆ ಭಾರತೀಯ ಪುರಾತನ ಸಂಸ್ಕೃತಿಯಾಗಿದ್ದು, ಶಿಕ್ಷಣದ ಮೂಲಕ ಜನರನ್ನು ಒಗ್ಗೂಡಿಸಬೇಕು' ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಕರೆ ನೀಡಿದ್ದಾರೆ.
ಶನಿವಾರ ಇಲ್ಲಿನ ಸೆಂಟ್ ಜೋಸೆಫ್ ಇನ್ಸ್‍ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನ 25ನೆ ಘಟಿಕೋತ್ಸವದಲ್ಲಿ ಪದವಿ ಪ್ರದಾನ ಮಾಡಿ, ಪಿಜಿಡಿಎಂ ಕಾರ್ಯಕ್ರಮವನ್ನು ಪೂರ್ಣಗೊಳಿಸಿದ ಎಲ್ಲ ಪದವೀಧರರಿಗೆ ಅಭಿನಂದನೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ‘ಈ ವಿದ್ಯಾರ್ಥಿಗಳ ಮುಂದಿನ ಪ್ರಯತ್ನಗಳು ಯಶಸ್ವಿಯಾಗಲಿ' ಎಂದು ಹಾರೈಸಿದರು.
‘ವಿದ್ಯಾರ್ಥಿ ಜೀವನದಲ್ಲಿ ಪಡೆದ ಶಿಕ್ಷಣ ಎಲ್ಲ ವಲಯಗಳಿಗೂ ಅನುಕೂಲವಾಗಬೇಕು. ಆಧುನಿಕ ಜೀವನದಲ್ಲಿ ಶಿಕ್ಷಣ ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಬೇಕು. ಪ್ರಾಚೀನ ಸಂಸ್ಕೃತಿಯ ರಕ್ಷಣೆಗೆ ಶಿಕ್ಷಣ ಸೇತುವೆಯಾಗಬೇಕು ಎಂದು ಅವರು ಇದೇ ಸಂದರ್ಭದಲ್ಲಿ ಆಶಯವನ್ನು ವ್ಯಕ್ತಪಡಿಸಿದರು.
‘ಭಾರತ ಯುವ ಸಮೂಹವನ್ನೊಳಗೊಂಡ ರಾಷ್ಟ್ರವಾಗಿದ್ದು, ಇಲ್ಲಿ ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು. ಯುವ ಶಕ್ತಿ ಪರಿಸರದ ಒಂದು ಭಾಗವಾಗಬೇಕು. ತಾಪಮಾನ ಏರಿಕೆ ಜಾಗತಿಕ ಸಮಸ್ಯೆಯಾಗಿದ್ದು, ಗಿಡಗಳನ್ನು ನೆಟ್ಟು ತಂಪು ವಾತಾವರಣ ನಿರ್ಮಾಣ ಮಾಡಲು ಗಮನಹರಿಸಬೇಕು. ‘ಆಜಾದಿ ಕಾ ಅಮೃತ ಮಹೋತ್ಸವ' ಆಚರಿಸುತ್ತಿರುವ ಸಂದರ್ಭದಲ್ಲಿ ಸ್ವಾವಲಂಬಿ ಭಾರತ ನಿರ್ಮಾಣ ಮಾಡಲು ಪ್ರತಿಯೊಬ್ಬರು ಟೊಂಕಕಟ್ಟಿ ನಿಲ್ಲಬೇಕು ಎಂದು ಹೇಳಿದರು.







