ವಾಮಾಚಾರದ ಶಂಕೆ:ಮಾವನ ಶಿರಚ್ಛೇದಗೈದು ರುಂಡ ಮತ್ತು ಕೊಡಲಿಯೊಂದಿಗೆ ಬೀದಿಗಿಳಿದ ಆರೋಪಿ

ಸಾಂದರ್ಭಿಕ ಚಿತ್ರ
ಸಿಧಿ (ಮ.ಪ್ರ),ಮೇ 14: ವಾಮಾಚಾರದ ಶಂಕೆಯಿಂದ ಯುವಕನೋರ್ವ ತನ್ನ 60ರ ಹರೆಯದ ಸೋದರಮಾವನ ಶಿರಚ್ಛೇದಗೈದು,ಬಳಿಕ ರುಂಡ ಮತ್ತು ಕೊಡಲಿಯನ್ನು ಕೈಗಳಲ್ಲಿ ಹಿಡಿದುಕೊಂಡು ರಸ್ತೆಯಲ್ಲಿ ಸುಮಾರು ಎರಡು ಕಿ.ಮೀ.ನಡೆದ ಘಟನೆ ಸಿಧಿ ಜಿಲ್ಲೆಯ ಜಾಮೋದಿ ಪೊಲೀಸ್ ಠಾಣಾ ವ್ಯಾಪ್ತಿಯು ಕಾರಿಮಾಟಿ ಗ್ರಾಮದಲ್ಲಿ ಸಂಭವಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದರು.
ಆರೋಪಿ ಲಾಲಬಹಾದೂರ್ ಗೌಡ್ (26) ಎಂಬಾತ ತನ್ನ ಸೋದರಮಾವ ಮಕ್ಸೂದನ ಸಿಂಗ್ ಗೌಡ್ ತನ್ನ ವಿರುದ್ಧ ವಾಮಾಚಾರವನ್ನು ಮಾಡುತ್ತ,ತನಗೆ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾನೆ ಎಂದು ಶಂಕಿಸಿದ್ದ. ಶುಕ್ರವಾರ ಮಕ್ಸೂದನನ ಮನೆಗೆ ತೆರಳಿದ್ದ ಆರೋಪಿ ಆತನೊಂದಿಗೆ ವಾಗ್ವಾದ ನಡೆಸಿದ ಬಳಿಕ ಕೊಡಲಿಯಿಂದ ಕುತ್ತಿಗೆಗೆ ಹೊಡೆದಿದ್ದ. ಹೊಡೆತದ ತೀವ್ರತೆಯಿಂದ ಆತನ ರುಂಡ ಶರೀರದಿಂದ ಬೇರ್ಪಟ್ಟಿತ್ತು ಎಂದು ಪೊಲೀಸರು ತಿಳಿಸಿದರು.
ಹತ್ಯೆ ಬಳಿಕ ಆರೋಪಿ ರುಂಡ ಮತ್ತು ಕೊಡಲಿಯನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಸಾಗುತ್ತಿದ್ದಾಗ ಮಾಹಿತಿ ಪಡೆದಿದ್ದ ಪೊಲೀಸರು ಮಾರ್ಗಮಧ್ಯೆಯೇ ಬಂಧಿಸಿದ್ದಾರೆ.
ತನ್ನ ವಿರುದ್ಧ ವಾಮಾಚಾರ ನಡೆಸದಂತೆ ಸೋದರಮಾವನಿಗೆ ಹಲವಾರು ಬಾರಿ ಹೇಳಿದ್ದೆ,ಆದರೂ ಆತ ಕೇಳಿರಲಿಲ್ಲ ಎಂದು ಆರೋಪಿಯು ಪೊಲೀಸರಿಗೆ ತಿಳಿಸಿದ್ದಾನೆ.





