ಇಸ್ರೇಲ್ ಜೈಲಿನಲ್ಲಿ 70 ದಿನದಿಂದ ಉಪವಾಸ ನಡೆಸುತ್ತಿರುವ ಪೆಲೆಸ್ತೀನ್ ಕೈದಿಯ ರಕ್ಷಣೆಗೆ ಆಗ್ರಹ
Khalil Awawda(PHOTO:TWITTER)
ಜೆರುಸಲೇಂ, ಮೇ 14: ಇಸ್ರೇಲ್ನ ಜೈಲಿನಲ್ಲಿ ಯಾವುದೇ ವಿಚಾರಣೆ ಅಥವಾ ಆರೋಪ ದಾಖಲಾಗದೆ ಬಂಧನದಲ್ಲಿರುವ ಪೆಲೆಸ್ತೀನ್ನ ವ್ಯಕ್ತಿ ಕಳೆದ 70 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಅವರ ಆರೋಗ್ಯ ತೀವ್ರ ಹದಗೆಟ್ಟಿದ್ದು ಅವರ ರಕ್ಷಣೆಗೆ ಅಂತರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸುವಂತೆ ಬಂಧುಗಳು ಆಗ್ರಹಿಸಿದ್ದಾರೆ. ಖಲೀಲ್ ಅವಾವ್ದ (40 ವರ್ಷ)ರನ್ನು ಆಕ್ರಮಿತ ಪಶ್ಚಿಮ ದಂಡೆಯ ಇಥ್ನಾ ಗ್ರಾಮದ ಅವರ ಮನೆಯಿಂದ 2021ರ ಡಿಸೆಂಬರ್ನಲ್ಲಿ ಇಸ್ರೇಲ್ ಸೇನೆ ಬಂಧಿಸಿದ್ದು ಅಂದಿನಿಂದ ಅವರು ಇಸ್ರೇಲ್ ಜೈಲಿನಲ್ಲಿದ್ದಾರೆ.
ಇತರ 350 ಪೆಲೆಸ್ತೀನ್ ಕೈದಿಗಳಂತೆ ಅವಾವ್ದರನ್ನೂ ಆಡಳಿತಾತ್ಮಕ ಬಂಧನಲ್ಲಿರಿಸಲಾಗಿದೆ. ಆಡಳಿತಾತ್ಮಕ ಬಂಧನ ನಿಯಮವು ‘ಗುಪ್ತ ಮಾಹಿತಿ’ಯ ಆಧಾರದಲ್ಲಿ ಪೆಲೆಸ್ತೀನಿಯರನ್ನು ಅನಿರ್ಧಿಷ್ಟ ಅವಧಿಗೆ ಬಂಧನದಲ್ಲಿರಿಸಲು ಇಸ್ರೇಲ್ ಪೊಲೀಸರಿಗೆ ಅವಕಾಶ ನೀಡಿದೆ. ಇದೀಗ ಬಂಧನ ವಿರೋಧಿಸಿ ಅವಾವ್ದ ಕೈಗೊಂಡಿರುವ ಉಪವಾಸ ಸತ್ಯಾಗ್ರಹ 70 ದಿನ ದಾಟಿದೆ. ಅವರ ಬಿಡುಗಡೆಗೆ ಆಗ್ರಹಿಸಿ ಕುಟುಂಬದ ಸದಸ್ಯರು ಹಾಗೂ ಬಂಧುಗಳು ರ್ಯಾಲಿ ನಡೆಸಿದ್ದಾರೆ. ‘ಪೆಲೆಸ್ತೀನಿಯರಿಗೆ ಕಂಟಕವಾದ ವಿಷಯವನ್ನು ವಿರೋಧಿಸಿ ಖಲೀಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 70 ದಿನ ಕಳೆದಿದ್ದು ಅವರ ಆರೋಗ್ಯ ಬಿಗಡಾಯಿಸಿದೆ ಮತ್ತು ಇದುವರೆಗೆ ಸುಮಾರು 17 ಕಿಗ್ರಾಂ ತೂಕ ಕಳೆದುಕೊಂಡಿದ್ದಾರೆ. ಮಾನವ ಹಕ್ಕು ಹೋರಾಟಗಾರರು ಅಥವಾ ಇತರ ಸಂಘಟನೆಯವರು ಏನು ಮಾಡುತ್ತಿದ್ದಾರೆ? ಅವರು 100, 140 ದಿನ ಉಪವಾಸ ನಡೆಸಲಿ, ಅಥವಾ ಅವರಿಗೆ ಏನಾದರೂ ಆಗಲಿ(ದೇವರು ತಡೆಯಲಿ) ಎಂದು ಕಾಯುತ್ತಿದ್ದಾರೆಯೇ’ ಎಂದು ಪ್ರಶ್ನಿಸಿರುವ ಅವರ ಪತ್ನಿ, ಪತಿ ಹಾಗೂ ಇತರ ಪೆಲೆಸ್ತೀನ್ ಕೈದಿಗಳ ತಕ್ಷಣ ಬಿಡುಗಡೆಗೆ ಮಧ್ಯ ಪ್ರವೇಶಿಸುವಂತೆ ಅಂತರಾಷ್ಟ್ರೀಯ ಸಮುದಾಯವನ್ನು ಆಗ್ರಹಿಸಿದ್ದಾರೆ.
ಅವಾವ್ದ ತೀವ್ರ ನಿಶ್ಯಕ್ತರಾಗಿದ್ದು ಕುಳಿತುಕೊಳ್ಳಲೂ ಆಗದ ಸ್ಥಿತಿಯಲ್ಲಿದ್ದಾರೆ. ದೇಹದ ಎಲ್ಲಾ ಭಾಗಗಳಲ್ಲೂ ನೋವನ್ನು ಅನುಭವಿಸುತ್ತಿದ್ದಾರೆ ಎಂದು ರವಿವಾರ ಅವಾವ್ದರನ್ನು ಭೇಟಿಯಾಗಿದ್ದ ನ್ಯಾಯವಾದಿ ಅಹ್ಲಾಮ್ ಹದಾದ್ ಹೇಳಿದ್ದಾರೆ. ಆಡಳಿತಾತ್ಮಕ ಬಂಧನ ಕಾಯ್ದೆಯಡಿ ಇಸ್ರೇಲ್ ಪೊಲೀಸರಿಂದ ಪೆಲೆಸ್ತೀನೀಯರ ವ್ಯಾಪಕ ಬಂಧನವನ್ನು ಮಾನವ ಹಕ್ಕು ಸಂಘಟನೆ ಹಾಗೂ ಆ್ಯಮ್ನೆಸ್ಟಿ ಇಂಟರ್ನ್ಯಾಷನಲ್ ಖಂಡಿಸಿದೆ.