ಪತ್ರಕರ್ತೆ ಶಿರೀನ್ ಹತ್ಯೆ ಪ್ರಕರಣ : ಪಾರದರ್ಶಕ ತನಿಖೆಗೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಕರೆ
ನ್ಯೂಯಾರ್ಕ್, ಮೇ 14: ಪೆಲೆಸ್ತೀನ್ ನಗರ ಜೆನಿನ್‌ನಲ್ಲಿ ಅಲ್‌ಜಝೀರಾ ಪತ್ರಕರ್ತೆ ಶಿರೀನ್ ಹತ್ಯೆ ಮತ್ತು ಇನ್ನೊಬ್ಬ ಪತ್ರಕರ್ತ ಗಾಯಗೊಂಡಿರುವ ಪ್ರಕರಣವನ್ನು ಖಂಡಿಸಿರುವ ವಿಶ್ವಸಂಸ್ಥೆಯ ಭದ್ರತಾ ಸಮಿತಿ, ಈ ಬಗ್ಗೆ ತಕ್ಷಣವೇ ಸಮಗ್ರ, ಪಾರರ್ದಶಕ ಮತ್ತು ಸ್ವತಂತ್ರ ತನಿಖೆಯಾಗಬೇಕು ಎಂದು ಕರೆ ನೀಡಿದೆ.
ಶಿರೀನ್ ಅವರ ಕುಟುಂಬಕ್ಕೆ ಸಂತಾಪ ಮತ್ತು ಸಹಾನುಭೂತಿಯನ್ನು ಸಮಿತಿಯ ಸದಸ್ಯರು ವ್ಯಕ್ತಪಡಿಸಿದ್ದಾರೆ ಎಂದು ಭದ್ರತಾ ಸಮಿತಿ ಹೇಳಿದೆ. ಶಿರೀನ್ ಹತ್ಯೆಯ ಬಗ್ಗೆ ತಕ್ಷಣ ಸಮಗ್ರ, ಪಾರದರ್ಶಕ ಮತ್ತು ನ್ಯಾಯೋಚಿತ ತನಿಖೆ ನಡೆಸಿ ಇದಕ್ಕೆ ಹೊಣೆಯನ್ನು ಖಾತರಿಪಡಿಸಬೇಕು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ನಾಗರಿಕರ ರೀತಿಯಲ್ಲಿಯೇ ಪತ್ರಕರ್ತರಿಗೂ ರಕ್ಷಣೆ ನೀಡಬೇಕು ಎಂದು ಸಮಿತಿ ಸದಸ್ಯರು ಪುನರುಚ್ಚರಿಸಿದರು ಹಾಗೂ ಪರಿಸ್ಥಿತಿಯ ಮೇಲೆ ನಿಕಟ ನಿಗಾ ಮುಂದುವರಿಸಲಾಗುವುದು ಎಂದು ಹೇಳಿದ್ದಾರೆ. ಮೇ 11ರಂದು ಆಕ್ರಮಿತ ಪಶ್ಚಿಮದಂಡೆಯಲ್ಲಿ ಅಲ್‌ಜಝೀರಾದ ಪತ್ರಕರ್ತೆ ಶಿರೀನ್ ಗುಂಡೇಟಿನಿಂದ ಮೃತಪಟ್ಟಿದ್ದರೆ ಮತ್ತೊಬ್ಬ ಪತ್ರಕರ್ತ ಅಲಿ ಅಲ್ ಸಮೂದಿ ಗಾಯಗೊಂಡಿದ್ದರು. ಆ ದಿನ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಜೆನಿನ್ ನಿರಾಶ್ರಿತರ ಶಿಬಿರದಲ್ಲಿ ಕಾರ್ಯಾಚರಣೆ ನಡೆಸಿರುವುದಾಗಿ ಇಸ್ರೇಲ್ ಡಿಫೆನ್ಸ್ ಫೋರ್ಸ್ ದೃಢಪಡಿಸಿದೆ.
ಇದುವರೆಗೆ ಲಭಿಸಿದ ಮಾಹಿತಿ ಪ್ರಕಾರ, ಘಟನೆ ನಡೆದ ಸಂದರ್ಭ ಮನಬಂದಂತೆ ಗುಂಡು ಹಾರಿಸುತ್ತಿದ್ದ ಪೆಲೆಸ್ತೀನ್ ಸಶಸ್ತ್ರಧಾರಿ ತಂಡ ಪತ್ರಕರ್ತೆಯ ದುರದೃಷ್ಟಕರ ಸಾವಿಗೆ ಕಾರಣವಾಗಿರಬಹುದು ಎಂದು ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನೆಟ್ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.