ಅಮೆರಿಕದ ಸೂಪರ್ ಮಾರ್ಕೆಟ್ನಲ್ಲಿ ಗುಂಡಿನ ದಾಳಿ: 10 ಮಂದಿ ಬಲಿ
ಸಾಂದರ್ಭಿಕ ಚಿತ್ರ
ಬಫೆಲೊ: ನ್ಯೂಯಾರ್ಕ್ ನ ಬಫೆಲೊದ ಸೂಪರ್ ಮಾರ್ಕೆಟ್ನಲ್ಲಿ ಆಗಂತುಕ ಬಂದೂಕುಧಾರಿಯೊಬ್ಬ ಸಾಮೂಹಿಕವಾಗಿ ಗುಂಡುಹೊಡೆದ ಘಟನೆಯಲ್ಲಿ ಕನಿಷ್ಠ ಹತ್ತು ಮಂದಿ ಮೃತಪಟ್ಟಿದ್ದಾರೆ. ಶನಿವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಯನ್ನು ಕಾನೂನು ಜಾರಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಟಾಪ್ಸ್ ಫ್ರೆಂಡ್ಲಿ ಮಾರ್ಕೆಟ್ನಲ್ಲಿ ಗುಂಡೇಟು ತಗುಲಿದವರ ಸಂಖ್ಯೆ ಮತ್ತು ಅವರ ಆರೋಗ್ಯಸ್ಥಿತಿ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಿಲ್ಲ. ಘಟನೆ ಬಗ್ಗೆ ಹೇಳಿಕೆ ನೀಡಲು ಅನುಮತಿ ಇಲ್ಲ ಎಂದು ಇಬ್ಬರು ಉನ್ನತ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.
ಶೂಟಿಂಗ್ ಘಟನೆಯನ್ನು ಆರೋಪಿ ನೇರಪ್ರಸಾರ ಮಾಡುತ್ತಿದ್ದ ಎನ್ನಲಾಗಿದ್ದು, ತನ್ನ ಕಾರ್ಯಸೂಚಿಯನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದನೇ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇನ್ನೂ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಉದ್ದೇಶದ ಬಗ್ಗೆ ಇನ್ನೂ ತಿಳಿದುಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಇದು ಜನಾಂಗೀಯ ದಾಳಿಯೇ ಎಂಬುದನ್ನು ಪರಿಶೀಲಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸೂಪರ್ ಮಾರ್ಕೆಟ್ ಕರಿಯರು ಅಧಿಕ ಇರುವ ಪ್ರದೇಶದಲ್ಲಿದ್ದು, ಬಫೆಲೊ ಡೌನ್ಟೌನ್ನಿಂದ ಉತ್ತರಕ್ಕೆ 5 ಕಿಲೋಮೀಟರ್ ದೂರದಲ್ಲಿದೆ. ಸುತ್ತಮುತ್ತಲ ಪ್ರದೇಶ ವಸತಿ ಬಡಾವಣೆಗಳಿಂದ ಕೂಡಿದ್ದು, ಮಳಿಗೆಯ ಪಕ್ಕದಲ್ಲೇ ಫ್ಯಾಮಿಲಿ ಡಾಲರ್ ಸ್ಟೋರ್ ಮತ್ತು ಅಗ್ನಿಶಾಮಕ ಠಾಣೆ ಇದೆ.
ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಟ್ವೀಟ್ ಮಾಡಿದ್ದಾರೆ; ಆದರೆ ಆರೋಪಿಯ ಗುರುತು ಬಹಿರಂಗಪಡಿಸಿಲ್ಲ. 18 ವರ್ಷ ವಯಸ್ಸಿನ ಬಂದೂಕುಧಾರಿ ಬಿಳಿಯ ವ್ಯಕ್ತಿಯಾಗಿದ್ದು, ದೇಹಕವಚ ಮತ್ತು ಮಿಲಿಟರಿ ಶೈಲಿಯ ಉಡುಪು ಧರಿಸಿದ್ದ. ಆರೋಪಿಯ ಹೆಲ್ಮೆಟ್ಗೆ ಅಳವಡಿಸಲಾಗಿದ್ದ ಕ್ಯಾಮೆರಾ ಮೂಲಕ ಶೂಟಿಂಗನ್ನು ಲೈವ್ಸ್ಟ್ರೀಮ್ ಮಾಡಿದ್ದ ಎನ್ನಲಾಗಿದೆ.