ಮೈಸೂರು | ಶಾಸಕ ಜಿ.ಟಿ.ದೇವೇಗೌಡರ 3 ವರ್ಷದ ಮೊಮ್ಮಗಳು ನಿಧನ

ಗೌರಿ (Photo credit: Twitter@siddaramaiah)
ಮೈಸೂರು, ಮೇ 15: ಚಾಮುಂಡೇಶ್ವರಿ ಕ್ಷೇತ್ರದ ಶಾಸಕ, ಮಾಜಿ ಸಚಿವ ಜಿ.ಟಿ.ದೇವೇಗೌಡ ಅವರ ಮೊಮ್ಮಗಳು ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶಗೌಡರ ಪುತ್ರಿ ಗೌರಿ(3) ಅನಾರೋಗ್ಯದಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ನಿಧನರಾಗಿದ್ದಾಳೆ.
ಅನಾರೋಗ್ಯ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗೌರಿ ಶನಿವಾರ ತಡರಾತ್ರಿ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ಅಂತ್ಯಕ್ರಿಯೆ ರವಿವಾರ ಮಧ್ಯಾಹ್ನ 12 ಗಂಟೆಗೆ ಮೈಸೂರು ತಾಲೂಕಿನ ಗುಂಗ್ರಾಲ್ ಛತ್ರದಲ್ಲಿ ನೆರವೇರಲಿದೆ.
ಸಿದ್ದರಾಮಯ್ಯ, ಕುಮಾರಸ್ವಾಮಿ ಕಂಬನಿ:
ಶಾಸಕ ಜಿ.ಟಿ.ದೇವೇಗೌಡರ ಮೊಮ್ಮಗಳು ಗೌರಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ. ಮೃತ ಗೌರಿಯ ಆತ್ಮಕ್ಕೆ ಚಿರಶಾಂತಿ ಸಿಗಲಿ, ಮಗುವಿನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಜಿ.ಟಿ ದೇವೇಗೌಡರು ಹಾಗೂ ಆಕೆಯ ತಂದೆ, ತಾಯಿಗೆ ದೇವರು ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
ಮುದ್ದುಕಂದಳ ಅಗಲಿಕೆ ನನಗೆ ಅತೀವ ದುಖಃವನ್ನುಂಟು ಮಾಡಿದೆ. ಮಗುವಿನ ಆತ್ಮಕ್ಕೆ ಚಿರಶಾಂತಿ ಸಿಗಲಿ. ದುಖಃ ಭರಿಸುವ ಶಕ್ತಿಯನ್ನು ಶಾಸಕ ಜಿ.ಟಿ.ದೇವೇಗೌಡ, ಹರೀಶ್ ಗೌಡ ಕುಟುಂಬಕ್ಕೆಆ ಭಗವಂತ ದಯಪಾಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.







