"ಚುಂಬನ, ಮುದ್ದಾಡುವುದು ಅಸ್ವಾಭಾವಿಕ ಅಪರಾಧಗಳಲ್ಲ" ಎಂದು ಆರೋಪಿಗೆ ಜಾಮೀನು ನೀಡಿದ ಬಾಂಬೆ ಹೈಕೋರ್ಟ್

ಮುಂಬೈ: "ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377 ರ ಅಡಿಯಲ್ಲಿ ತುಟಿಗಳಿಗೆ ಮುತ್ತಿಡುವುದು ಮತ್ತು ಮುದ್ದಾಡುವುದು ಅಸ್ವಾಭಾವಿಕ ಅಪರಾಧವಲ್ಲ" ಎಂದ ಬಾಂಬೆ ಹೈಕೋರ್ಟ್ ಅಪ್ರಾಪ್ತ ವಯಸ್ಸಿನ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. 14ರ ಹರೆಯದ ಬಾಲಕನ ತಂದೆ ನೀಡಿದ್ದ ದೂರಿನನ್ವಯ ಕಳೆದ ವರ್ಷ ಬಂಧಿಸಲ್ಪಟ್ಟಿದ್ದ ವ್ಯಕ್ತಿಗೆ ನ್ಯಾಯಮೂರ್ತಿ ಅನುಜಾ ಪ್ರಭುದೇಸಾಯಿ ಜಾಮೀನು ಮಂಜೂರು ಮಾಡಿದರು.
ಎಫ್‌ಐಆರ್ ಪ್ರಕಾರ, ಬಾಲಕನು ಆನ್‌ಲೈನ್ ಗೇಮ್ ಗೆ ಸಂಬಂಧಿಸಿ ರೀಚಾರ್ಜ್ ಮಾಡುವ ಸಲುವಾಗಿ ಮನೆಯ ಕಪಾಟಿನಿಂದ ಹಣ ಎಗರಿಸಿದ ಬಳಿಕ ಅಂಗಡಿಗೆ ತೆರಳಿದ್ದು ಈ ವೇಳೆ ಅಂಗಡಿಯಾತನು ಬಾಲಕನ ತುಟಿಗೆ ಮುತ್ತಿಕ್ಕಿ ಖಾಸಗಿ ಭಾಗಗಳನ್ನು ಮುಟ್ಟಿದ್ದನು ಎಂದು ಆರೋಪಿಸಲಾಗಿದೆ.
ನಂತರ, ಬಾಲಕನ ತಂದೆ ಪೊಲೀಸರನ್ನು ಸಂಪರ್ಕಿಸಿದ್ದು, ಆರೋಪಿಯ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ತಡೆಗಟ್ಟುವಿಕೆ (ಪೋಕ್ಸೊ) ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಮತ್ತು ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 377 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಈ ಪ್ರಕರಣದಡಿಯಲ್ಲಿ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬಹುದಾಗಿದ್ದು, ಜಾಮೀನು ದೊರಕಲೂ ಕಷ್ಟವಾಗಿದೆ.
"ಬಾಲಕನ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ಅದರ ಫಲಿತಾಂಶವು ಬಾಲಕನ ಮೇಲೆ ಯಾವುದೇ ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ತೋರಿಸಿಲ್ಲ" ಎಂದು ನ್ಯಾಯಧೀಶರು ಜಾಮೀನು ಮಂಜೂರು ಮಾಡುವ ವೇಳೆ ಹೇಳಿದರು. ಆರೋಪಿಯ ವಿರುದ್ಧ ವಿಧಿಸಲಾದ POCSO ಸೆಕ್ಷನ್‌ಗಳು ಗರಿಷ್ಠ ಐದು ವರ್ಷಗಳ ಶಿಕ್ಷೆಯನ್ನು ವಿಧಿಸಬಹುದಾಗಿದ್ದು, ಜಾಮೀನಿಗೆ ಅರ್ಹವಾಗಿದೆ. ಪ್ರಸ್ತುತ ಪ್ರಕರಣದಲ್ಲಿ, ಅಸ್ವಾಭಾವಿಕ ಲೈಂಗಿಕತೆಯ ಅಂಶವು ಪ್ರಾಥಮಿಕವಾಗಿ ಅನ್ವಯಿಸುವುದಿಲ್ಲ ಎಂದು ನ್ಯಾಯಮೂರ್ತಿ ಪ್ರಭುದೇಸಾಯಿ ಹೇಳಿದರು.
"ಸಂತ್ರಸ್ತರ ಹೇಳಿಕೆ ಹಾಗೂ ಎಫ್‌ಐಆರ್ ಮುಖಾಂತರ ಅರ್ಜಿದಾರ ಆರೋಪಿಯು ಬಾಲಕನ ಖಾಸಗಿ ಭಾಗಗಳನ್ನು ಸ್ಪರ್ಶಿಸಿದ್ದಾರೆ ಮತ್ತು ಅವನ ತುಟಿಗಳಿಗೆ ಮುತ್ತಿಟ್ಟಿದ್ದಾರೆ ಎಂದು ಸೂಚಿಸಿದ್ದಾರೆ. ನನ್ನ ಅಭಿಪ್ರಾಯದಲ್ಲಿ, ಇದು ಪ್ರಾಥಮಿಕವಾಗಿ ಭಾರತೀಯ ದಂಡಸಂಹಿತೆ ಸೆಕ್ಷನ್ 377 ರ ಅಡಿಯಲ್ಲಿ ಅಪರಾಧವಾಗುವುದಿಲ್ಲ. ಆರೋಪಿ ಈಗಾಗಲೇ ಒಂದು ವರ್ಷ ಬಂಧನಲ್ಲಿದ್ದು, ಪ್ರಕರಣದ ವಿಚಾರಣೆ ಶೀಘ್ರವೇ ಆರಂಭಗೊಳ್ಳುವ ಸಾಧ್ಯತೆಯಿಲ್ಲ. ಈ ಸಂದರ್ಣ ಮತ್ತು ವಿಚಾರಗಳನ್ನು ಗಮನಿಸಿ ಅರ್ಜಿದಾರರು ಜಾಮೀನಿಗೆ ಅರ್ಹರಾಗಿದ್ದಾರೆ" ಎಂದು ಆರೋಪಿಗೆ 30,000 ರೂ.ಗಳ ವೈಯಕ್ತಿಕ ಬಾಂಡ್‌ನಲ್ಲಿ ಜಾಮೀನು ನೀಡುವಾಗ ಹೈಕೋರ್ಟ್ ಹೇಳಿದೆ.