ಅಮೆರಿಕ: ಜನಾಂಗೀಯ ಪ್ರೇರಿತ ಗುಂಡಿನ ದಾಳಿ ನಡೆಸಿದ 18ರ ಯುವಕ: 10 ಮಂದಿ ಮೃತ್ಯು
Photo: Twitter/@timesofindia
ವಾಷಿಂಗ್ಟನ್, ಮೇ 15: ನ್ಯೂಯಾರ್ಕ್ ನ ಬಫೆಲೊ ಸಿಟಿಯ ಸೂಪರ್ಮಾರ್ಕೆಟ್ನಲ್ಲಿ ರವಿವಾರ ನಡೆದ ಜನಾಂಗೀಯ ಪ್ರೇರಿತ ಗುಂಡಿನ ದಾಳಿಯಲ್ಲಿ 10 ಮಂದಿ ಮೃತಪಟ್ಟಿದ್ದು ಇತರ 3 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿಯನ್ನು, 18 ವರ್ಷದ ಶ್ವೇತವರ್ಣೀಯ ವ್ಯಕ್ತಿ ಪ್ಯಾಟನ್ ಎಸ್ ಜೆಂಡ್ರಾನ್ ಎಂದು ಗುರುತಿಸಲಾಗಿದೆ. ಸೂಪರ್ಮಾರ್ಕೆಟ್ಗೆ ನುಗ್ಗಿದ ಈತ ಕೈಯಲ್ಲಿದ್ದ ಗನ್ನಿಂದ ಮನಬಂದಂತೆ ಗುಂಡು ಹಾರಿಸಿ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ. ದಾಳಿಗೆ ಒಳಗಾದವರಲ್ಲಿ 11 ಮಂದಿ ಕಪ್ಪು ವರ್ಣೀಯರು. ದಾಳಿ ನಡೆದ ಸೂಪರ್ಮಾರ್ಕೆಟ್ ನ ಸಮೀಪವಿರುವ ತನ್ನ ಮನೆಯಿಂದ ಕಾರಿನಲ್ಲಿ ಜೆಂಡ್ರಾನ್ ಸೂಪರ್ಮಾರ್ಕೆಟ್ಗೆ ಆಗಮಿಸಿ ಕಪ್ಪು ವರ್ಣೀಯರನ್ನು ಗುರಿಯಾಗಿಸಿ ಗುಂಡು ಹಾರಿಸಿದ್ದು ಇದೊಂದು ಜನಾಂಗೀಯ ಪ್ರೇರಿತ ದಾಳಿ ಎಂಬುದು ಸ್ಪಷ್ಟವಾಗಿದೆ ಎಂದು ಎರೈ ಕೌಂಟಿಯ ಆಡಳಿತಗಾರ ಜಾನ್ ಗಾರ್ಶಿಯಾ ಹೇಳಿದ್ದಾರೆ.
ಗುಂಡು ಹಾರಿಸಿದ ವ್ಯಕ್ತಿ ದೇಹಕ್ಕೆ ರಕ್ಷಾಕವಚ ಧರಿಸಿದ್ದ ಮತ್ತು ಸೇನಾ ಯೋಧರಂತೆ ಸಮವಸ್ತ್ರ ಧರಿಸಿದ್ದ ಎಂದು ದಿ ಅಸೋಸಿಯೇಟೆಡ್ ಪ್ರೆಸ್ ವರದಿ ಮಾಡಿದೆ.
ಸೂಪರ್ಮಾರ್ಕೆಟ್ ಬಳಿ ವಾಹನ ನಿಲ್ಲಿಸಿ ಹೊರಬಂದಾಗ ಆತನ ಕೈಯಲ್ಲಿ ಬಂದೂಕು ಇತ್ತು ಮತ್ತು ಆತ ಯುದ್ಧತಂತ್ರದ ಸಾಧನಗಳನ್ನು ಹೊಂದಿದ್ದ. ತನ್ನ ಬಳಿಯಿದ್ದ ಕ್ಯಾಮೆರಾ ಮೂಲಕ ತನ್ನ ಕೃತ್ಯವನ್ನು ಆತ ನೇರ ಪ್ರಸಾರ ಮಾಡುತ್ತಿದ್ದ. ಸೂಪರ್ಮಾರ್ಕೆಟ್ಗೆ ನುಗ್ಗಿ ಮನಬಂದಂತೆ ಗುಂಡು ಹಾರಿಸಿದ ಆತ, ಪೊಲೀಸರನ್ನು ಕಂಡೊಡನೆ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಎಂದು ನಗರ ಪೊಲೀಸ್ ಆಯುಕ್ತ ಜೋಸೆಫ್ ಗ್ರಮಾಗ್ಲಿಯಾ ಹೇಳಿದ್ದಾರೆ.
ತನ್ನ ಕುತ್ತಿಗೆಗೆ ಗನ್ ಗುರಿಯಾಗಿಸಿದ ಆರೋಪಿ ಮುಂದೆ ಬರದಂತೆ ಪೊಲೀಸರಿಗೆ ಸೂಚಿಸಿದ. ಬಂದೂಕು ಕೆಳ ಹಾಕುವಂತೆ ಆತನ ಮನವೊಲಿಸಲಾಯಿತು ಮತ್ತು ಆತ ಶರಣಾದ ಎಂದು ಗ್ರಮಾಗ್ಲಿಯಾ ಹೇಳಿದ್ದಾರೆ. ಆರೋಪಿ ಜೆಂಡ್ರಾನ್ ಸಾಮಾಜಿಕ ಮಾಧ್ಯಮದಲ್ಲಿ ಜನಾಂಗೀಯ ದ್ವೇಷಕ್ಕೆ ಪ್ರಚೋದನೆ ನೀಡುವ ಪೋಸ್ಟ್ ಗಳನ್ನು ಹಾಕುತ್ತಿದ್ದ ಮತ್ತು ಸೂಪರ್ಮಾರ್ಕೆಟ್ ಮೇಲೆ ದಾಳಿ ನಡೆಸುವ ತನ್ನ ಯೋಜನೆಯನ್ನು ಮೊದಲೇ ಪೋಸ್ಟ್ ಮಾಡಿದ್ದ . ವಲಸಿಗರನ್ನು ವಿರೋಧಿಸುವ ಹೇಳಿಕೆ ನೀಡುತ್ತಿದ್ದ ಆತ, ಕರಿಯ ವರ್ಣದ ಜನರಿಂದ ಅಮೆರಿಕನ್ನರ ಅಸ್ತಿತ್ವಕ್ಕೆ ಅಪಾಯವಿದೆ ಎಂದು ಹೇಳುತ್ತಿದ್ದ. ಇತರ ಬಿಳಿಯರ ಪ್ರಾಬಲ್ಯದ ಹಿಂಸಾಚಾರದಿಂದ ಪ್ರೇರಣೆ ಪಡೆದಿರುವುದಾಗಿ ಆತ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾನೆ. ಆರೋಪಿಯನ್ನು ನ್ಯೂಯಾರ್ಕ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಆತನನ್ನು ಜಾಮೀನುರಹಿತ ಬಂಧನದಲ್ಲಿ ಇರಿಸುವಂತೆ ನ್ಯಾಯಾಲಯ ಸೂಚಿಸಿದೆ.