ಪಾಕಿಸ್ತಾನದಲ್ಲಿ ಇಬ್ಬರು ಸಿಖ್ ಉದ್ಯಮಿಗಳ ಹತ್ಯೆ
ಇಸ್ಲಮಾಬಾದ್, ಮೇ 15: ಪಾಕಿಸ್ತಾನದ ವಾಯವ್ಯದಲ್ಲಿರುವ ಖೈಬರ್ ಪಖ್ತೂಂಕ್ವಾ ಪ್ರಾಂತದಲ್ಲಿ ರವಿವಾರ ಅಪರಿಚಿತ ಬಂದೂಕುಧಾರಿಗಳು ಇಬ್ಬರು ಸಿಖ್ ಉದ್ಯಮಿಗಳನ್ನು ಗುಂಡಿಕ್ಕಿ ಹತ್ಯೆ ಮಾಡಿರುವುದಾಗಿ ವರದಿಯಾಗಿದೆ.
ಅಫ್ಗಾನಿಸ್ತಾನದ ಗಡಿಭಾಗದಲ್ಲಿರುವ ಪ್ರಕ್ಷುಬ್ಧ ಖೈಬರ್ ಪಖ್ತೂಂಕ್ವಾದಲ್ಲಿ ಅಲ್ಪಸಂಖ್ಯಾತ ಸಮುದಾಯವನ್ನು ಗುರಿಯಾಗಿಸಿ ನಡೆಸುತ್ತಿರುವ ಹತ್ಯಾಕಾಂಡದ ಮತ್ತೊಂದು ಪ್ರಕರಣ ಇದಾಗಿದೆ. ಮೃತರನ್ನು ಸಲ್ಜೀತ್ ಸಿಂಗ್ (42 ವರ್ಷ) ಮತ್ತು ರಂಜೀತ್ ಸಿಂಗ್ (38 ವರ್ಷ) ಎಂದು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ಸರ್ಬಂದ್ ಗ್ರಾಮದ ಬಟಾ ತಾಲ್ ಬಝಾರ್ನಲ್ಲಿ ಮಸಾಲೆ ಪದಾರ್ಥಗಳ ವ್ಯವಹಾರ ನಡೆಸುತ್ತಿದ್ದರು. ರವಿವಾರ ಬೆಳಿಗ್ಗೆ ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಇವರ ಮೇಲೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ. ಯಾವುದೇ ಸಂಘಟನೆ ಹತ್ಯೆಯ ಹೊಣೆ ವಹಿಸಿಲ್ಲ.
ಖೈಬರ್ ಪಖ್ತೂಂಖ್ವಾದ ಮುಖ್ಯಮಂತ್ರಿ ಮಹ್ಮೂದ್ ಖಾನ್ ದಾಳಿಯನ್ನು ಖಂಡಿಸಿದ್ದು, ಈ ಪ್ರಾಂತದಲ್ಲಿನ ಅಂತರ್ಧರ್ಮೀಯ ಸಾಮರಸ್ಯವನ್ನು ಕೆಡಿಸಲು ನಡೆಸಿರುವ ಷಡ್ಯಂತ್ರ ಇದಾಗಿದೆ ಎಂದಿದ್ದಾರೆ. ಹತ್ಯೆಯಾದವರ ಕುಟುಂಬಕ್ಕೆ ನ್ಯಾಯ ಒದಗಿಸಲಾಗುವುದು ಎಂದಿರುವ ಖಾನ್, ದುಷ್ಕರ್ಮಿಗಳ ಬಂಧನಕ್ಕೆ ತಕ್ಷಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಪೇಷಾವರದಲ್ಲಿ ಸುಮಾರು 15,000 ಸಿಖ್ಗಳು ವಾಸಿಸುತ್ತಿದ್ದು ಹೆಚ್ಚಿನವರು ಉದ್ಯಮಿಗಳಾಗಿದ್ದಾರೆ. 2017ರ ಜನಗಣತಿ ಪ್ರಕಾರ, ಪಾಕಿಸ್ತಾನದಲ್ಲಿ ಹಿಂದುಗಳು ಅತೀ ದೊಡ್ಡ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದರೆ, ಕ್ರಿಶ್ಚಿಯನ್ನರು ಆ ಬಳಿಕದ ಸ್ಥಾನದಲ್ಲಿದ್ದಾರೆ. ಅಹ್ಮದೀಯರು, ಸಿಖ್ ಮತ್ತು ಪಾರ್ಸಿಗಳು ಪಾಕ್ನಲ್ಲಿರುವ ಇತರ ಪ್ರಮುಖ ಧಾರ್ಮಿಕ ಅಲ್ಪಸಂಖ್ಯಾತರಾಗಿದ್ದಾರೆ.