"ಪುಟಿನ್ ತೀವ್ರ ಅಸ್ವಸ್ಥರಾಗಿದ್ದು, ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ": ಬ್ರಿಟನ್ ಮಾಜಿ ಗುಪ್ತಚರ ಅಧಿಕಾರಿ
ಹೊಸದಿಲ್ಲಿ, ಮೇ 13: ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಗಂಭೀರವಾಗಿ ಅಸ್ವಸ್ಥರಾಗಿದ್ದಾರೆ ಮತ್ತು ಇದು ಉಕ್ರೇನ್‌ನಲ್ಲಿ ನಡೆಸಿರುವ ಕೃತ್ಯದ ಒಂದು ಭಾಗವಾಗಿರಬಹುದು ಎಂದು ಬ್ರಿಟನ್ ನ ಮಾಜಿ ಗುಪ್ತಚರ ಅಧಿಕಾರಿ ಹೇಳಿದ್ದಾರೆ.
ಅವರ ಖಾಯಿಲೆಯ ಬಗ್ಗೆ ನಿಖರ ಮಾಹಿತಿಯಿಲ್ಲ. ಇದು ಗುಣಪಡಿಸಲಾಗದ ಕಾಯಿಲೆ ಅಥವಾ ಇನ್ನೇನೋ ಆಗಿರಬಹುದು. ಆದರೆ ಒಂದಂತೂ ಸತ್ಯ, ಇದು ಸಮೀಕರಣದ ಭಾಗವಾಗಿದೆ ಎಂದು ಭಾವಿಸುತ್ತೇನೆ. ರಶ್ಯ ಮತ್ತು ಇತರೆಡೆಯ ಮೂಲಗಳಿಂದ ದೊರಕಿದ ಮಾಹಿತಿಯ ಪ್ರಕಾರ ಪುಟಿನ್ ಗಂಭೀರವಾಗಿ ಅಸ್ವಸ್ಥಗೊಂಡಿರುವುದು ಸತ್ಯ ಎಂದು ಬ್ರಿಟನ್ ಗುಪ್ತಚರ ಇಲಾಖೆಯ ಮಾಜಿ ಅಧಿಕಾರಿ ಕ್ರಿಸ್ಟೋಫರ್ ಸ್ಟೀಲೆ ಹೇಳಿದ್ದಾರೆ.
ಈ ಮಧ್ಯೆ, ಪುಟಿನ್ ಗೆ ಅತ್ಯಂತ ಆಪ್ತವಾಗಿರುವ ರಶ್ಯದ ಮುಖಂಡರೊಬ್ಬರು ಪಾಶ್ಚಾತ್ಯ ಉದ್ಯಮಿಯೊಬ್ಬರ ಜತೆ ಮಾತನಾಡುತ್ತಿದ್ದ ಸಂದರ್ಭ ‘ಪುಟಿನ್ ರಕ್ತದ ಕ್ಯಾನ್ಸರ್ ನಿಂದ ತೀವ್ರ ಅಸ್ವಸ್ಥರಾಗಿದ್ದಾರೆ’ ಎಂದು ಹೇಳಿರುವುದಾಗಿ ಅಮೆರಿಕದ ಪತ್ರಿಕೆ ನ್ಯೂ ಲೈನ್ಸ್ ವರದಿ ಮಾಡಿದೆ. ಉಕ್ರೇನ್ ಯುದ್ಧದ ಬಳಿಕ ಸಾರ್ವಜನಿಕ ಸಮಾರಂಭ, ವಿಜಯ ದಿನಾಚರಣೆ ಮುಂತಾದ ಕಾರ್ಯಕ್ರಮದಲ್ಲಿ ಪುಟಿನ್ ಈ ಹಿಂದಿನಂತೆ ಲವಲವಿಕೆಯಿಂದ ಪಾಲ್ಗೊಳ್ಳದೆ ನಿಸ್ತೇಜರಾಗಿದ್ದರು ಎಂಬ ವರದಿಯ ಬಳಿಕ ಅವರ ಆರೋಗ್ಯದ ಬಗ್ಗೆ ಊಹಾಪೋಹ ಗರಿಗೆದರಿದೆ. ಮಾಸ್ಕೋದ ಕೆಂಪುವೃತ್ತದಲ್ಲಿ ನಡೆದ ಮಿಲಿಟರಿ ಕವಾಯತಿನ ಸಂದರ್ಭ ವೇದಿಕೆಯಲ್ಲಿ ಆಸೀನರಾಗಿದ್ದ ಪುಟಿನ್ ತನ್ನ ಕಾಲುಗಳ ಮೇಲೆ ಕಡುಹಸಿರು ಬಣ್ಣದ ಹೊದಿಕೆ ಹೊದ್ದಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಪುಟಿನ್ ಪದಚ್ಯುತಿಗೆ ದಂಗೆ: ಉಕ್ರೇನ್ ಸೇನಾಧಿಕಾರಿ ಹೇಳಿಕೆ
ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದ ಮಧ್ಯೆಯೇ, ರಶ್ಯ ಅಧ್ಯಕ್ಷ ಪುಟಿನ್ ರನ್ನು ಪದಚ್ಯುತಗೊಳಿಸುವ ಕ್ಷಿಪ್ರಕ್ರಾಂತಿಗೆ ಚಾಲನೆ ದೊರೆತಿದ್ದು ಅದನ್ನು ತಡೆಯುವುದು ಅಸಾಧ್ಯವಾಗಿದೆ ಎಂದು ಉಕ್ರೇನ್ ಸೇನಾಧಿಕಾರಿ ಹೇಳಿದ್ದಾರೆ.
ಸ್ಕೈ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಮೇಜರ್ ಜನರಲ್ ಕಿರಿಲೊ ಬುಡನೊವ್, ಆಗಸ್ಟ್ ಮಧ್ಯಭಾಗದಲ್ಲಿ ಯುದ್ಧಕ್ಕೆ ತಿರುವು ದೊರಕಬಹುದು ಮತ್ತು ಈ ವರ್ಷಾಂತ್ಯಕ್ಕೆ ಯುದ್ಧ ಕೊನೆಗೊಳ್ಳಬಹುದು. ಒಂದು ವೇಳೆ ರಶ್ಯ ಸೋತರೆ, ಪುಟಿನ್ ಪದಚ್ಯುತಗೊಳ್ಳಲಿದ್ದಾರೆ ಮತ್ತು ರಶ್ಯ ಪತನವಾಗಲಿದೆ ಎಂದಿದ್ದಾರೆ.
ರಶ್ಯದಲ್ಲಿ ಪುಟಿನ್ ವಿರುದ್ಧ ದಂಗೆಗೆ ಚಾಲನೆ ದೊರಕಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ‘ ಹೌದು. ಅವರು ಈ ನಿಟ್ಟಿನಲ್ಲಿ ಮುಂದುವರಿಯುತ್ತಿದ್ದಾರೆ ಮತ್ತು ಅವರನ್ನು ತಡೆಯುವುದು ಅಸಾಧ್ಯ. ಅಂತಿಮವಾಗಿ ನಾಯಕತ್ವ ಬದಲಾವಣೆಗೆ ಇದು ಕಾರಣವಾಗಲಿದೆ ಎಂದರು.
ಪುಟಿನ್ ರಕ್ತದ ಕ್ಯಾನ್ಸರ್ ಮತ್ತಿತರ ಕಾಯಿಲೆಯಿಂದ ಬಳಲುತ್ತಿದ್ದು ಅವರ ಮಾನಸಿಕ ಮತ್ತು ದೈಹಿಕ ಸ್ಥಿತಿ ಹದಗೆಟ್ಟಿದೆ. ಅವರು ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಹೇಳಿದ ಬುಡನೊವ್, ತಮ್ಮ ಅನಾರೋಗ್ಯದ ಬಗ್ಗೆ ಪುಟಿನ್ ಸುಳ್ಳು ಸುದ್ಧಿ ಪ್ರಸಾರ ಮಾಡುತ್ತಿದ್ದಾರೆ. ಇದೊಂದು ತಂತ್ರಗಾರಿಕೆ ಎಂಬ ವರದಿಯನ್ನು ನಿರಾಕರಿಸಿದರು. ಪುಟಿನ್ ಅನಾರೋಗ್ಯದ ಬಗ್ಗೆ ಹಲವು ವರದಿ, ಇದಕ್ಕೆ ಸಂಬಂಧಿಸಿದ ಹಲವು ವೀಡಿಯೊಗಳು, ಬೆಲಾರಸ್ ಮುಖಂಡ ಅಲೆಕ್ಸಾಂಡರ್ ಲುಕಶೆಂಕೊರಿಗೆ ಹಸ್ತಲಾಘವ ನೀಡುವಾಗ ಪುಟಿನ್ ಕೈ ನಡುಗುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ. ಆದರೆ ಈ ಬಗ್ಗೆ ರಶ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.