"ಮತ್ತೊಂದು ಗಂಭೀರ ಪ್ರಮಾದ": ಫಿನ್ಲ್ಯಾಂಡ್, ಸ್ವೀಡನ್ ನೇಟೊ ಸೇರ್ಪಡೆ ನಿರ್ಧಾರಕ್ಕೆ ರಶ್ಯ ಪ್ರತಿಕ್ರಿಯೆ
Sweden's Prime Minister Magdalena Andersson and Finland's Prime Minister Sanna Marin(Reuters)
ಮಾಸ್ಕೊ, ಮೇ 16: ನೇಟೊ ಒಕ್ಕೂಟಕ್ಕೆ ಸೇರ್ಪಡೆಗೊಳ್ಳುವ ಫಿನ್ಲ್ಯಾಂಡ್ ಮತ್ತು ಸ್ವೀಡನ್ನ ನಿರ್ಧಾರ ದೂರಗಾಮಿ ಪರಿಣಾಮ ಬೀರುವ ಮತ್ತೊಂದು ಗಂಭೀರ ಪ್ರಮಾದವಾಗಿದೆ ಎಂದು ರಶ್ಯದ ಸಹಾಯಕ ವಿದೇಶಾಂಗ ಸಚಿವ ಸೆರ್ಗೈ ರ್ಯಬ್ಕೋವ್ ಹೇಳಿದ್ದಾರೆ.
ಇದರಿಂದ ಮಿಲಿಟರಿ ಉದ್ವಿಗ್ನತೆಯ ಪ್ರಮಾಣ ಹೆಚ್ಚಲಿದೆ ಮತ್ತು ಈ ಬಗ್ಗೆ ರಶ್ಯ ಕ್ರಮ ಕೈಗೊಳ್ಳಲಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಕೆಲವು ಭ್ರಮಾತ್ಮಕ ಕಲ್ಪನೆಗಳಿಗೆ ಸಾಮಾನ್ಯ ಜ್ಞಾನವನ್ನು ಬಲಿಕೊಡುತ್ತಿರುವುದು ವಿಷಾದದ ಸಂಗತಿಯಾಗಿದೆ. ನೇಟೊ ಸೇರ್ಪಡೆಯಿಂದ ಎರಡೂ ದೇಶಗಳ ಭದ್ರತೆ ಖಂಡಿತಾ ಹೆಚ್ಚುವುದಿಲ್ಲ . ನಾವು ಇದನ್ನು ಸಹಿಸಿಕೊಂಡು ಸುಮ್ಮನಿರುತ್ತೇವೆ ಎಂಬ ಭ್ರಮೆ ಅವರಿಗೆ ಇರಬಾರದು ಎಂದವರು ಹೇಳಿದ್ದಾರೆ.
ರಶ್ಯದ ಆಕ್ರಮಣದ ಭೀತಿ ಎದುರಾಗಿರುವುದರಿಂದ ನೇಟೊ ಸೇರ್ಪಡೆಯ ಬಗ್ಗೆ ದಶಕಗಳಿಂದ ಚಾಲ್ತಿಯಲ್ಲಿರುವ ಪ್ರಯತ್ನಕ್ಕೆ ಅಂತಿಮ ರೂಪು ನೀಡಲು ಫಿನ್ಲ್ಯಾಂಡ್ ಮತ್ತು ಸ್ವೀಡನ್ ನಿರ್ಧರಿಸಿವೆ. ಈ ಬಗ್ಗೆ ತೀವ್ರ ಪ್ರತಿಕ್ರಮ ಕೈಗೊಳ್ಳುವುದಾಗಿ ರಶ್ಯ ಫಿನ್ಲ್ಯಾಂಡ್ಗೆ ಎಚ್ಚರಿಕೆ ನೀಡಿದೆ. ರಶ್ಯವು ಫಿನ್ಲ್ಯಾಂಡ್ ಜತೆ 1,300 ಕಿ.ಮೀ ಉದ್ದದ ಗಡಿಯನ್ನು ಹೊಂದಿದೆ. ಶನಿವಾರ ರಶ್ಯ ಅಧ್ಯಕ್ಷ ಪುಟಿನ್ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದ ಫಿನ್ಲ್ಯಾಂಡ್ ಅಧ್ಯಕ್ಷ ಸೌಲಿ ನಿನಿಸ್ಟೊ, ನೇಟೊ ಸೇರ್ಪಡೆಗೆ ಅರ್ಜಿ ಹಾಕಿರುವ ಮಾಹಿತಿ ನೀಡಿದ್ದರು. ಇದು ಮತ್ತೊಂದು ಗಂಭೀರ ಪ್ರಮಾದ ಎಂದು ಪುಟಿನ್ ಪ್ರತಿಕ್ರಿಯಿಸಿದರು ಎಂದು ಮಾಧ್ಯಮಗಳು ವರದಿ ಮಾಡಿವೆ.