ಉಕ್ರೇನ್ನ 3 ಯುದ್ಧವಿಮಾನ ಧ್ವಂಸ: ರಶ್ಯ ಹೇಳಿಕೆ
ಮಾಸ್ಕೊ, ಮೇ 16: ತನ್ನ ಸೇನೆ ಸೋಮವಾರ ಉಕ್ರೇನ್ನ 3 ಯುದ್ಧವಿಮಾನವನ್ನು ಹೊಡೆದುರುಳಿಸಿದ್ದು ಉಕ್ರೇನ್ನ ಪೂರ್ವದ ಗುರಿಗಳನ್ನು ಕೇಂದ್ರೀಕರಿಸಿ ವಾಯುದಾಳಿ ತೀವ್ರಗೊಳಿಸಲಾಗಿದೆ ಎಂದು ರಶ್ಯ ಹೇಳಿದೆ.
ಮಿಕೊಲೈವ್ ಪ್ರಾಂತದ ಯೆವ್ಹೆನ್ವಿಕಾ ಮತ್ತು ಖಾರ್ಕಿವ್ನ ಕೊಮಿಶುವಕ ಪ್ರದೇಶದಲ್ಲಿ ಎಸ್ಯು-25 ಯುದ್ಧವಿಮಾನ, ಸ್ನೇಕ್ ಐಲ್ಯಾಂಡ್ ಪ್ರದೇಶದ ಬಳಿ ಎಸ್ಯು-24 ಯುದ್ಧವಿಮಾನವನ್ನು ಹೊಡೆದುರುಳಿಸಲಾಗಿದೆ ಎಂದು ರಶ್ಯದ ರಕ್ಷಣಾ ಸಚಿವಾಲಯ ಸೋಮವಾರ ಹೇಳಿದೆ.
ಅಧಿಕ ನಿಖರತೆಯ ಕ್ಷಿಪಣಿ ಬಳಸಿ ಉಕ್ರೇನ್ನ ಖಾರ್ಕಿವ್ ಪ್ರದೇಶದಲ್ಲಿ 2 ಸೇನಾ ನೆಲೆಗಳನ್ನು ಧ್ವಂಸ ಮಾಡಲಾಗಿದೆ. ಜತೆಗೆ ಶಸ್ತ್ರಾಸ್ತ್ರ ಸಂಗ್ರಹಾಗಾರ ಸಹಿತ ಇತರ ಪ್ರಮುಖ ಕೇಂದ್ರಗಳಿಗೂ ಭಾರೀ ಹಾನಿಯಾಗಿದೆ. ಇದೇ ರೀತಿ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರಾಂತದಲ್ಲಿ ಡ್ರೋನ್ ಬಳಸಿ ದಾಳಿ ನಡೆಸಲಾಗಿದೆ. ಉಕ್ರೇನ್ನಲ್ಲಿ ಮಿಲಿಟರಿ ಕಾರ್ಯಾಚರಣೆ ಆರಂಭವಾದಂದಿನಿಂದ ತನ್ನ ಸೇನೆ ಉಕ್ರೇನ್ನ 168 ಯುದ್ಧವಿಮಾನ, 125 ಹೆಲಿಕಾಪ್ಟರ್, 889 ಮಾನವರಹಿತ ವೈಮಾನಿಕ ವಾಹನ, 317 ವಿಮಾನ ವಿರೋಧಿ ಕ್ಷಿಪಣಿ ವ್ಯವಸ್ಥೆ ಮತ್ತು 3,108 ಟ್ಯಾಂಕ್ ಹಾಗೂ ಇತರ ಸೇನಾ ವಾಹನಗಳನ್ನು ನಾಶಗೊಳಿಸಿದೆ ಎಂದು ರಶ್ಯ ಹೇಳಿದೆ.