ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ ಎರಡು ಮೊಬೈಲ್ ಕಳ್ಳತನ!
![ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ ಎರಡು ಮೊಬೈಲ್ ಕಳ್ಳತನ! ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ರ ಎರಡು ಮೊಬೈಲ್ ಕಳ್ಳತನ!](https://www.varthabharati.in/sites/default/files/images/articles/2022/05/17/335393-1652752028.jpg)
ಇಸ್ಮಾಮಾಬಾದ್: ತಮ್ಮ ಹತ್ಯೆಗೆ ಸಂಚು ರೂಪಿಸಿದ ವ್ಯಕ್ತಿಗಳನ್ನು ಹೆಸರಿಸಿ ವೀಡಿಯೊವನ್ನು ಚಿತ್ರೀಕರಿಸಿದ್ದಾಗಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗಪಡಿಸಿದ ಬೆನ್ನಲ್ಲೇ ಅವರ ಎರಡು ಮೊಬೈಲ್ಗಳು ಕಳ್ಳತನವಾಗಿವೆ.
ಶನಿವಾರ ಇಮ್ರಾನ್ ಖಾನ್ ಅವರು ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲು ತೆರಳಿದ ವೇಳೆ ಸಿಯಾಲ್ ಕೋಟ್ ವಿಮಾನ ನಿಲ್ದಾಣದಲ್ಲಿ ಫೋನ್ಗಳು ಕಳ್ಳತನವಾಗಿವೆ ಎಂದು ಖಾನ್ ಅವರ ವಕ್ತಾರ ಶಹಬಾಝ್ ಗಿಲ್ ಟ್ವೀಟ್ ಮಾಡಿದ್ದಾರೆ.
"ನನ್ನ ಹತ್ಯೆಗೆ ಸಂಚು ನಡೆದಿದ್ದು, ನನಗೆ ಪ್ರಾಣಾಪಾಯವಿದೆ. ಎಲ್ಲ ಸಂಚುಕೋರರ ಹೆಸರನ್ನು ಬಹಿರಂಗಪಡಿಸುವ ವೀಡಿಯೊ ಸಂದೇಶವನ್ನು ನಾನು ಚಿತ್ರೀಕರಿಸಿದ್ದೇನೆ. ನನ್ನ ಹತ್ಯೆ ನಡೆದರೆ ಅದನ್ನು ಬಿಡುಗಡೆ ಮಾಡಲಾಗುವುದು" ಎಂದು ಇಮ್ರಾನ್ ಖಾನ್ ತಮ್ಮ ಬೆಂಬಲಿಗರಿಗೆ ಈ ರ್ಯಾಲಿಯಲ್ಲಿ ಹೇಳಿದ್ದರು.
"ಒಂದೆಡೆ ಉದ್ದೇಶಪೂರ್ವಕವಾಗಿ ಇಮ್ರಾನ್ಖಾನ್ಗೆ ಭದ್ರತೆ ನೀಡಿಲ್ಲ; ಇನ್ನೊಂದೆಡೆ ಅವರ ಎರಡು ಮೊಬೈಲ್ಗಳು ಕಳ್ಳತನವಾಗಿವೆ" ಎಂದು ಗಿಲ್ ಹೇಳಿದ್ದಾರೆ. "ನೀವು ಗೊಂದಲಕ್ಕೀಡಾಗಿದ್ದೀರಿ. ಖಾನ್ ದಾಖಲಿಸಿರುವ ವೀಡಿಯೊ ಹೇಳಿಕೆ ಈ ಫೋನ್ಗಳಲ್ಲಿ ಪತ್ತೆಯಾಗದು" ಎಂದು ಗಿಲ್ ಹೇಳಿದ್ದಾರೆ.
ಗಿಲ್ ಹೇಳಿಕೆ ಬಗ್ಗೆ ಸರ್ಕಾರ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.