ಶೈಕ್ಷಣಿಕ ಅಭಿವೃದ್ದಿಗಾಗಿ ಸರಕಾರದಿಂದ ಮಹತ್ತರ ಯೋಜನೆ: ಎಸ್.ಅಂಗಾರ
ಕುಂದಾಪುರ : ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಣ ವಂಚಿರಾಗ ಬಾರದೆಂಬ ಉದ್ದೇಶದಿಂದ ಸರಕಾರ ಶೈಕ್ಷಣಿಕ ಅಭಿವೃದ್ದಿಗಾಗಿ ಮತ್ತು ವಸತಿ ಸೌಲಭ್ಯ ವ್ಯವಸ್ಥೆ ನೀಡುವ ಮೂಲಕ ಹಲವು ಮಹತ್ತರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಮೀನುಗಾರಿಕೆ, ಬಂದರು, ಒಳನಾಡು, ಜಲಸಾರಿಗೆ ಇಲಾಖೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಹೇಳಿದ್ದಾರೆ.
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕುಂದಾಪುರ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಬೈಂದೂರು ವಿ.ಜೆ.ನಗರದಲ್ಲಿ ೪ ಕೋಟಿ ೨೫ ಲಕ್ಷ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಪರಿಶಿಷ್ಟ ವರ್ಗದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ಬೈಂದೂರು ಟೌನ್ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.
ಪರಿಶಿಷ್ಟ ಪಂಗಡ ಪರಿಶಿಷ್ಟ ಜಾತಿ ಅಭಿವೃದ್ದಿಗೆ ಹಾಗೂ ಅವರ ಮಕ್ಕಳು ಪರಿಪೂರ್ಣ ಶಿಕ್ಷಣ ಪಡೆಯಬೇಕೆಂಬ ಸದ್ದುದ್ದೇಶದಿಂದ ಅತ್ಯಾಧುನಿಕ ಸೌಲಭ್ಯದ ವಸತಿ ಶಾಲೆ ನಿರ್ಮಿಸಿದ್ದು ಈ ಸವಲತ್ತುಗಳ ಸದುಪಯೋಗವಾದಾಗ ಮಾತ್ರ ಸಾರ್ಥಕತೆಯಾಗುತ್ತದೆ ಎಂದರು.
ಅಧ್ಯಕ್ಷತೆಯನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ವಹಿಸಿದ್ದರು. ಉಡುಪಿ ಜಿಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಸನ್ನ ಎಚ್., ಕುಂದಾ ಪುರ ಉಪವಿಭಾಗದ ಸಹಾಯಕ ಆಯುಕ್ತ ಕೆ.ರಾಜು, ಕ್ರೈಸ್ ಸಂಸ್ಥೆಯ ರಾಮು, ಬೈಂದೂರು ತಹಶೀಲ್ದಾರ್ ಶೋಭಾಲಕ್ಷ್ಮಿ, ತಾಪಂ ಕಾರ್ಯನಿರ್ವಾ ಹಣಾಧಿಕಾರಿ ಎಸ್.ಭಾರತಿ, ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ಐ.ಟಿ.ಡಿ.ಪಿ ಯೋಜನಾ ಸಮನ್ವಯಾಧಿಕಾರಿ ದೂದಪೀರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್.ವರ್ಣೇಕರ್ ಸ್ವಾಗತಿಸಿದರು. ಶಿಕ್ಷಕ ಸುಧಾಕರ ಪಿ. ಬೈಂದೂರು ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.