ಐಪಿಎಲ್: ಮುಂಬೈ ವಿರುದ್ಧ ಹೈದರಾಬಾದ್ಗೆ ರೋಚಕ ಜಯ
ರಾಹುಲ್ ತ್ರಿಪಾಠಿ ಅರ್ಧಶತಕ, ಉಮ್ರಾನ್ ಮಲಿಕ್ಗೆ ಮೂರು ವಿಕೆಟ್

Photo:twitter
ಮುಂಬೈ, ಮೇ 17: ರೋಹಿತ್ ಶರ್ಮಾ(48 ರನ್)ಹಾಗೂ ಇಶಾನ್ ಕಿಶನ್(43 ರನ್)ಮೊದಲ ವಿಕೆಟ್ಗೆ ಸೇರಿಸಿದ 95 ರನ್ ಜೊತೆಯಾಟ ಹಾಗೂ ಟಿಮ್ ಡೇವಿಡ್ ಭರ್ಜರಿ ಬ್ಯಾಟಿಂಗ್(46 ರನ್, 18 ಎಸೆತ,3 ಬೌಂಡರಿ, 4 ಸಿಕ್ಸರ್)ಹೊರತಾಗಿಯೂ ಮುಂಬೈ ಇಂಡಿಯನ್ಸ್ ತಂಡ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 3 ರನ್ಗಳ ಅಂತರದಿಂದ ಸೋಲುಂಡಿದೆ.
ಮಂಗಳವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 65ನೇ ಐಪಿಎಲ್ ಪಂದ್ಯದಲ್ಲಿ ಗೆಲ್ಲಲು 193 ರನ್ ಗುರಿ ಪಡೆದ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಇನಿಂಗ್ಸ್ ಆರಂಭಿಸಿದ ರೋಹಿತ್(48 ರನ್, 36 ಎಸೆತ, 2 ಬೌಂಡರಿ, 4 ಸಿಕ್ಸರ್)ಹಾಗೂ ಕಿಶನ್(43 ರನ್, 34 ಎಸೆತ, 5 ಬೌಂಡರಿ, 1 ಸಿಕ್ಸರ್)ಮುಂಬೈ ಉತ್ತಮ ಆರಂಭ ಒದಗಿಸಿದರು. ಆದರೆ ಈ ಆರಂಭವನ್ನು ಟಿಮ್ ಡೇವಿಡ್ ಸದುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ ಅವರು 18ನೇ ಓವರ್ನಲ್ಲಿ ರನೌಟಾದರು.
ಹೈದರಾಬಾದ್ ಪರ ಉಮ್ರಾನ್ ಮಲಿಕ್(3-23)ಯಶಸ್ವಿ ಬೌಲರ್ ಎನಿಸಿಕೊಂಡರು. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ ಅಗ್ರ ಕ್ರಮಾಂಕದ ಬ್ಯಾಟರ್ ರಾಹುಲ್ ತ್ರಿಪಾಠಿ ಅರ್ಧಶತಕದ(76 ರನ್, 44 ಎಸೆತ)ನೆರವಿನಿಂದ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ಗಳ ನಷ್ಟಕ್ಕೆ 193 ರನ್ ಗಳಿಸಿದೆ.
2.4ನೇ ಓವರ್ನಲ್ಲಿ ಅಭಿಷೇಕ್ ಶರ್ಮಾ(9 ರನ್)ವಿಕೆಟನ್ನು ಕಳೆದುಕೊಂಡ ಹೈದರಾಬಾದ್ ಕಳಪೆ ಆರಂಭ ಪಡೆಯಿತು. ಆಗ ಜೊತೆಯಾದ ಪ್ರಿಯಂ ಗರ್ಗ್(42 ರನ್, 26 ಎಸೆತ, 4 ಬೌಂಡರಿ, 2 ಸಿಕ್ಸರ್)ಹಾಗೂ ರಾಹುಲ್ ತ್ರಿಪಾಠಿ(76 ರನ್, 44 ಎಸೆತ, 9 ಬೌಂಡರಿ, 3 ಸಿಕ್ಸರ್)ಎರಡನೇ ವಿಕೆಟ್ಗೆ 78 ರನ್ ಸೇರಿಸಿ ತಂಡವನ್ನು ಆಧರಿಸಿದರು.
ಗರ್ಗ್ ಔಟಾದ ಬಳಿಕ ನಿಕೊಲಸ್ ಪೂರನ್(38 ರನ್, 22 ಎಸೆತ, 2 ಬೌಂಡರಿ, 3 ಸಿಕ್ಸರ್) ಜೊತೆಗೆ ಕೈಜೋಡಿಸಿದ ತ್ರಿಪಾಠಿ 3ನೇ ವಿಕೆಟ್ಗೆ 76 ರನ್ ಜೊತೆಯಾಟ ನಡೆಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಿದರು. ಪೂರನ್, ರಾಹುಲ್ ತ್ರಿಪಾಠಿ, ಮರ್ಕ್ರಮ್(2) ಬೆನ್ನುಬೆನ್ನಿಗೆ ಔಟಾದ ಕಾರಣ ಹೈದರಾಬಾದ್ 200ರ ಗಡಿ ದಾಟಲಾಗದೆ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಿತು.
ಮುಂಬೈ ಇಂಡಿಯನ್ಸ್ ಪರ ರಮಣ್ದೀಪ್ ಸಿಂಗ್(3-20)ಯಶಸ್ವಿ ಬೌಲರ್ ಎನಿಸಿಕೊಂಡರು. ಜಸ್ಪ್ರಿತ್ ಬುಮ್ರಾ(1-32), ಡೇನಿಯಲ್ ಸ್ಯಾಮ್ಸ್(1-39) ಹಾಗೂ ರಿಲೆ ಮೆರೆಡಿತ್(1-44)ತಲಾ ಒಂದು ವಿಕೆಟ್ ಪಡೆದರು.