ಅಮೆರಿಕ: ಹೈಪರ್ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ

ವಾಷಿಂಗ್ಟನ್, ಮೇ 17: ಶಬ್ದದ ವೇಗಕ್ಕಿಂತ ಐದು ಪಟ್ಟು ಅಧಿಕ ವೇಗದಲ್ಲಿ ಸಂಚರಿಸುವ ಅತ್ಯಾಧುನಿಕ ಹೈಪರ್ಸಾನಿಕ್ ಅಸ್ತ್ರದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿದೆ ಎಂದು ಅಮೆರಿಕ ಸೋಮವಾರ ಹೇಳಿದೆ.
ದಕ್ಷಿಣ ಕ್ಯಾಲಿಫೋರ್ನಿಯಾದ ತೀರದಲ್ಲಿರುವ ಸೇನಾ ನೆಲೆಯಲ್ಲಿ ಶನಿವಾರ ಸೂಪರ್ಸಾನಿಕ್ ಅಸ್ತ್ರದ ಪರೀಕ್ಷೆ ನಡೆದಿದೆ. ಬಿ-52 ಬಾಂಬರ್ ವಿಮಾನವು ಆಗಸದಲ್ಲಿ ಉಡಾಯಿಸುವ ಕ್ಷಿಪ್ರ ಪ್ರತಿಕ್ರಿಯೆ ಶಸ್ತ್ರಾಸ್ತ್ರ (ಎಆರ್ಆರ್ಡಬ್ಲ್ಯೂ)ವನ್ನು ಚಿಮ್ಮಿಸಿದೆ. ಬಳಿಕ ಎಆರ್ಆರ್ಡಬ್ಲ್ಯೂನ ಬೂಸ್ಟರ್ ವ್ಯವಸ್ಥೆಯು ಚಾಲನೆಗೊಂಡು ಹೈಪರ್ಸಾನಿಕ್ ಆಯುಧದ ವೇಗವನ್ನು ಶಬ್ದದ ವೇಗಕ್ಕಿಂತ 5 ಪಟ್ಟಿನಷ್ಟು ಹೆಚ್ಚಿಸಿದೆ ಎಂದು ಸೋಮವಾರ ಬಿಡುಗಡೆಗೊಳಿಸಿದ ಹೇಳಿಕೆ ತಿಳಿಸಿದೆ.
ಮಾರ್ಚ್ ಮಧ್ಯಭಾಗದಲ್ಲೂ ಹೈಪರ್ಸಾನಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿರುವುದಾಗಿ ಅಮೆರಿಕ ಹೇಳಿತ್ತು. ರಶ್ಯ ಕೂಡಾ ಹೈಪರ್ಸಾನಿಕ್ ಕ್ಷಿಪಣಿಯನ್ನು ಹೊಂದಿದ್ದು ತನ್ನ ಕಿಂಝಾಲ್ ಅಥವಾ ಡ್ಯಾಗರ್ ಹೈಪರ್ಸಾನಿಕ್ ಕ್ಷಿಪಣಿ ಶಬ್ದದ ವೇಗಕ್ಕಿಂತ ಹತ್ತು ಪಟ್ಟು ಅಧಿಕ ವೇಗದಲ್ಲಿ ಗುರಿಯತ್ತ ಸಾಗುತ್ತದೆ ಎಂದು ರಶ್ಯ ಹೇಳಿದೆ. ಅಲ್ಲದೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ಅದನ್ನು ಯಶಸ್ವಿಯಾಗಿ ಬಳಸಿರುವುದಾಗಿಯೂ ಘೋಷಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕದ ರಕ್ಷಣಾ ಇಲಾಖೆ, ವೇಗವನ್ನು ಹೊರತುಪಡಿಸಿ, ಉಳಿದ ವಿಷಯದಲ್ಲಿ ಈ ಕ್ಷಿಪಣಿಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳಿವೆ ಎಂದಿದೆ. ಚೀನಾ ಕೂಡಾ ಸೂಪರ್ಸಾನಿಕ್ ಕ್ಷಿಪಣಿಯ ಪರೀಕ್ಷೆ ನಡೆಸಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಆರೋಪಿಸಿದ್ದು ಇದನ್ನು ಚೀನಾ ನಿರಾಕರಿಸಿದೆ.