6 ತಿಂಗಳೊಳಗೆ ಗ್ರೀನ್ಕಾರ್ಡ್ ಅರ್ಜಿ ಪರಿಷ್ಕರಣೆ: ಅಮೆರಿಕ ಅಧ್ಯಕ್ಷರ ಸಲಹಾ ಸಮಿತಿ ಶಿಫಾರಸು
ವಾಷಿಂಗ್ಟನ್, ಮೇ 17: ಗ್ರೀನ್(ಹಸಿರು) ಕಾರ್ಡ್ಗಳನ್ನು ಬಯಸಿ ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನೂ 6 ತಿಂಗಳೊಳಗೆ ಪರಿಷ್ಕರಿಸುವಂತೆ ಅಮೆರಿಕದ ಅಧ್ಯಕ್ಷರ ಸಲಹಾ ಸಮಿತಿ ಅಧ್ಯಕ್ಷ ಜೋ ಬೈಡನ್ಗೆ ಶಿಫಾರಸು ಮಾಡಿರುವುದಾಗಿ ಪಿಟಿಐ ಸೋಮವಾರ ವರದಿ ಮಾಡಿದೆ.
ಅಧಿಕೃತವಾಗಿ ಶಾಶ್ವತ ನಿವಾಸಿ ಕಾರ್ಡ್ ಎಂದು ಕರೆಯಲಾಗುವ ಹಸಿರು ಕಾರ್ಡ್ ಹೊಂದಿದ ವ್ಯಕ್ತಿ ಅಮೆರಿಕದಲ್ಲಿ ಖಾಯಂ ವಾಸಿಸಲು ಹಾಗೂ ಕಾರ್ಯನಿರ್ವಹಿಸಲು ಅವಕಾಶವಿದೆ. ಶಾಶ್ವತ ನಿವಾಸಿ ಸ್ಥಾನಮಾನ ಲಭಿಸಿದ 5 ವರ್ಷಗಳ ಬಳಿಕ ಹಸಿರು ಕಾರ್ಡ್ ಹೊಂದಿದವರು ದೇಶದ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು.
ಏಶ್ಯನ್ ಅಮೆರಿಕನ್ನರು, ಸ್ಥಳೀಯ ಹವಾಯಿನ್ನರು(ಹವಾಯಿ ದ್ವೀಪದ ಮೂಲನಿವಾಸಿಗಳು) ಮತ್ತು ಪೆಸಿಫಿಕ್ ದ್ವೀಪದವರಿಗಾಗಿನ ಅಮೆರಿಕ ಅಧ್ಯಕ್ಷರ ಸಲಹಾ ಆಯೋಗವು ಈ ಶಿಫಾರಸು ಮಾಡಿದೆ. ಕಳೆದ ವಾರ ನಡೆದ ಆಯೋಗದ ಸಭೆಯಲ್ಲಿ ಭಾರತೀಯ ಅಮೆರಿಕನ್ ಸಮುದಾಯದ ಮುಖಂಡ ಅಜಯ್ ಜೈನ್ ಭುತೋರಿಯಾ ಈ ಬಗ್ಗೆ ಪ್ರಸ್ತಾವನೆಯನ್ನು ಸಲ್ಲಿಸಿದ್ದು ಆಯೋಗದ 25 ಸದಸ್ಯರು ಇದನ್ನು ಅನುಮೋದಿಸಿದ್ದಾರೆ. ಶಿಫಾರಸನ್ನು ಅನುಮೋದನೆಗಾಗಿ ಶ್ವೇತಭವನಕ್ಕೆ ರವಾನಿಸಲಾಗುವುದು.
ಪ್ರಕ್ರಿಯೆಗಳನ್ನು ಪರಿಶೀಲಿಸಲು ಮತ್ತು ಹೊಸ ಸಮಯದ ಗುರಿಯನ್ನು ನಿಗದಿಪಡಿಸುವಂತೆ ಆಯೋಗವು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗಕ್ಕೆ ಸಲಹೆ ನೀಡಿದೆ. ಅನಗತ್ಯ ಹಂತಗಳನ್ನು ತೆಗೆದುಹಾಕಲು, ಹಸ್ತಚಾಲಿತ ಅನುಮೋದನೆ ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಮತ್ತು ಅರ್ಜಿಗಳ ತ್ವರಿತ ಪ್ರಕ್ರಿಯೆಗಳನ್ನು ಖಚಿತಪಡಿಸಿಕೊಳ್ಳಲು ಅವುಗಳ ಆಂತರಿಕ ಡ್ಯಾಶ್ಬೋರ್ಡ್ಗಳನ್ನು ಸುಧಾರಿಸಬೇಕು, ಅಮೆರಿಕದ ರಾಷ್ಟ್ರೀಯ ವೀಸಾ ಸೇವಾ ಕೇಂದ್ರಕ್ಕೆ ಇನ್ನಷ್ಟು ಸಿಬಂದಿಗಳನ್ನು ನೇಮಿಸಿಕೊಂಡು ಹಸಿರು ಕಾರ್ಡ್ಗಳ ಪರಿಶೀಲನೆ ಪ್ರಕ್ರಿಯೆ ಮತ್ತು ಹಸಿರು ಕಾರ್ಡ್ ಸಂದರ್ಶನ ಪ್ರಕ್ರಿಯೆಯ ಸಾಮರ್ಥ್ಯವನ್ನು ಆಗಸ್ಟ್ ಬಳಿಕದ 3 ತಿಂಗಳೊಳಗೆ 100% ಹೆಚ್ಚಿಸಬೇಕು. ಆ ಬಳಿಕ ಹಸಿರು ಕಾರ್ಡ್ ಸಂದರ್ಶನ ಮತ್ತು ವೀಸಾ ಪರಿಷ್ಕರಣೆ ಸಮಯ ನಿಗದಿ ಗರಿಷ್ಟ 6 ತಿಂಗಳು ಎಂದು ನಿಗದಿಗೊಳಿಸಬೇಕು ಎಂದು ಆಯೋಗ ಸಲಹೆ ನೀಡಿದೆ.
ಪ್ರತೀ ವರ್ಷ ಅಮೆರಿಕ 1,40,000 ಹಸಿರು ಕಾರ್ಡ್ಗಳನ್ನು ನೀಡುತ್ತದೆ, ಆದರೆ ಒಂದು ವರ್ಷದಲ್ಲಿ ಒಂದೇ ದೇಶದ ಅರ್ಜಿದಾರರಿಗೆ ಇದರಲ್ಲಿ ಕೇವಲ 7% ದಷ್ಟು ಕಾರ್ಡ್ ಮಾತ್ರ ನೀಡಲಾಗುತ್ತದೆ. ಅರ್ಜಿ ಪರಿಶೀಲನೆ ಪ್ರಕ್ರಿಯೆ ಬಾಕಿಯಿರುವುದರಿಂದ ಸುಮಾರು 3,57,720 ಭಾರತೀಯರ ಉದ್ಯೋಗಾಧಾರಿತ ಆಧಾರಿತ ಹಸಿರು ಕಾರ್ಡ್ ಅರ್ಜಿಯನ್ನು ಇತ್ಯರ್ಥಗೊಳಿಸಲಾಗಿಲ್ಲ ಎಂದು ‘ದಿ ಇಕನಾಮಿಕ್ಸ್ ಟೈಮ್ಸ್’ ವರದಿ ಮಾಡಿದೆ.
ಬಳಕೆಯಾಗದ ಉದ್ಯೋಗಾಧಾರಿತ ವೀಸಾ ವ್ಯರ್ಥವಾಗುವುದನ್ನು ತಡೆಯಲು ಪ್ರಯತ್ನಿಸುವ ಉದ್ದೇಶದ ಕಾಯ್ದೆ ಜಾರಿಗೆ ಅನುವು ಮಾಡಿಕೊಡುವ ಮಸೂದೆಯನ್ನು ಅಮೆರಿಕದ ಸಂಸತ್ ಸದಸ್ಯೆ ಜೋಯೆ ಲಾಫ್ಗ್ರೀನ್ ಮಂಡಿಸಿದ್ದಾರೆ. ಉದ್ಯೋಗಾಧಾರಿತ ವೀಸಾಗಳು ಕುಟುಂಬ ಆಧಾರಿತ ವರ್ಗಗಳಿಗೆ ವರ್ಗಾವಣೆಯಾಗುವುದು ಈ ಮಸೂದೆಯ ಉದ್ದೇಶವಾಗಿದೆ ಎಂದು ವರದಿಯಾಗಿದೆ.