ಈಶಾನ್ಯ ಭಾರತದಲ್ಲಿ ಪ್ರವಾಹ, ಭೂಕುಸಿತ: ಅಸ್ಸಾಂನಲ್ಲೇ 4 ಲಕ್ಷ ಸಂತ್ರಸ್ತರು

Photo: PTI
ಗುವಾಹತಿ: ಅಸ್ಸಾಂನ ಇನ್ನಷ್ಟು ಭಾಗಗಳು ಪ್ರವಾಹಪೀಡಿತವಾಗಿದ್ದು, ರಾಜ್ಯದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ಪ್ರವಾಹ ಸಂತ್ರಸ್ತರಾಗಿದ್ದಾರೆ. ಮತ್ತಷ್ಟು ಮಂದಿ ಮಳೆ ಸಂಬಂಧಿ ಅನಾಹುತಗಳಿಗೆ ಬಲಿಯಾಗಿದ್ದು, ನಿನ್ನೆಯಿಂಚೆಗೆ ಪ್ರವಾಹ ಮತ್ತು ಭೂಕುಸಿತಕ್ಕೆ ಬಲಿಯಾದವರ ಸಂಖ್ಯೆ ಎಂಟಕ್ಕೇರಿದೆ ಎಂದು ಸರ್ಕಾರ ಪ್ರಕಟಿಸಿದೆ.
ಧಾರಾಕಾರ ಮಳೆಯಿಂದಾಗಿ ಬಹಳಷ್ಟು ಕಡೆಗಳಲ್ಲಿ ಭೂಕುಸಿತ ಸಂಭವಿಸಿದ್ದು, ಬರಾಕ್ ಕಣಿವೆ ಮತ್ತು ದಿಮ ಹಸಾವೊ ಜಿಲ್ಲೆಗಳಲ್ಲಿ ರಸ್ತೆ ಹಾಗೂ ರೈಲು ಸಂಪರ್ಕ ಅಸ್ತವ್ಯಸ್ತಗೊಂಡಿದೆ. ತ್ರಿಪುರಾ, ಮಣಿಪುರ ಹಾಗೂ ಮಿಜೋರಾಂನಲ್ಲಿ ಕೂಡಾ ಮಳೆ ವ್ಯಾಪಕ ಅನಾಹುತಗಳಿಗೆ ಕಾರಣವಾಗಿದೆ.
ಅರುಣಾಚಲ ಪ್ರದೇಶ ಮತ್ತು ಮೇಘಾಲಯದಲ್ಲೂ ಭೂಕುಸಿತ ಸಂಭವಿಸಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅಸ್ಸಾಂ ರಾಜ್ಯ ವಿಕೋಪ ನಿರ್ವಹಣೆ ಪ್ರಾಧಿಕಾರದ ಬುಲೆಟಿನ್ ಪ್ರಕಾರ ರಾಜ್ಯದ 26 ಜಿಲ್ಲೆಗಳಲ್ಲಿ 4,03,352 ಮಂದಿ ಸಂತ್ರಸ್ತರಾಗಿದ್ದಾರೆ. ಕಚಾರ್ ಜಿಲ್ಲೆಯಲ್ಲಿ ವ್ಯಾಪಕ ಹಾನಿ ಸಂಭವಿಸಿದ್ದು, 96,697 ಮಂದಿ ಸಂತ್ರಸ್ತರಾಗಿದ್ದಾರೆ. ಭೂಕುಸಿತದಲ್ಲಿ ಐದು ಮಂದಿ ಸಮಾಧಿಯಾಗುವ ಮೂಲಕ ಒಟ್ಟು ಮೃತಪಟ್ಟವರ ಸಂಖ್ಯೆ ಎಂಟಕ್ಕೇರಿದೆ.