ಚೀನಾ ಜೆಟ್ ಅಪಘಾತ ಉದ್ದೇಶಪೂರ್ವಕ: ಬ್ಲ್ಯಾಕ್ಬಾಕ್ಸ್ ಡಾಟಾದಿಂದ ಬಹಿರಂಗ; ವರದಿ
File Photo: PTI
ವಾಷಿಂಗ್ಟನ್: ಮಾರ್ಚ್ನಲ್ಲಿ ಅಪಘಾತಕ್ಕೀಡಾದ ಚೈನಾ ಈಸ್ಟರ್ನ್ ಏರ್ಲೈನ್ಸ್ ನ ಜೆಟ್ ವಿಮಾನದ ಬ್ಲ್ಯಾಕ್ ಬಾಕ್ಸ್ ನ ಮಾಹಿತಿಗಳಿಂದ ತಿಳಿದು ಬರುವಂತೆ ಕಾಕ್ಪಿಟ್ನಲ್ಲಿದ್ದ ಕೆಲವರು ಉದ್ದೇಶಪೂರ್ವಕವಾಗಿ ವಿಮಾನವನ್ನು ಅಪಘಾತಕ್ಕೀಡು ಮಾಡಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಅಮೆರಿಕ ಅಧಿಕಾರಿಗಳ ಪ್ರಾಥಮಿಕ ಅಂದಾಜನ್ನು ಉಲ್ಲೇಖಿಸಲಾಗಿದ್ದು, ತಾಂತ್ರಿಕ ದೋಷದ ಯಾವುದೇ ಸೂಚನೆ ಕಾಣುತ್ತಿಲ್ಲ. ಆದ್ದರಿಂದ ವಿಮಾನದ ಸಿಬ್ಬಂದಿಯ ಕ್ರಮಗಳ ಬಗ್ಗೆಯೇ ಗಮನ ಹರಿದಿದೆ ಎಂದು ರಾಯ್ಟರ್ ಜತೆ ಮಾತನಾಡಿದ ಪಾಶ್ಚಿಮಾತ್ಯ ಅಧಿಕಾರಿಗಳು ಹೇಳಿದ್ದಾರೆ.
ಜೆಟ್ ತಯಾರಿಸಿದ ಬೋಯಿಂಗ್ ಕಂಪನಿ ಈ ಕುರಿತ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದು, ಚೀನಾದ ನಿಯಂತ್ರಕರಿಗೆ ಪ್ರಶ್ನೆಯನ್ನು ಕಳುಹಿಸಿದೆ. ಅಮೆರಿಕದ ರಾಷ್ಟ್ರೀಯ ಸಾರಿಗೆ ಸುರಕ್ಷಾ ಮಂಡಳಿ ಕೂಡಾ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಮಾರ್ಚ್ನಲ್ಲಿ ಬೋಯಿಂಗ್ 737-800 ಜೆಟ್, ಕುನ್ಮಿಂಗ್ನಿಂದ ಗುವಾಂಝುಗೆ ಹೋಗುತ್ತಿದ್ದಾಗ ಗೌನ್ಕ್ಸಿ ಪವರ್ತತ ಶ್ರೇಣಿಯಲ್ಲಿ ಅಪಘಾತಕ್ಕೀಡಾಗಿ 123 ಮಂದಿ ಪ್ರಯಾಣಿಕರು ಮತ್ತು ಒಂಬತ್ತು ಮಂದಿ ಸಿಬ್ಬಂದಿ ಮೃತಪಟ್ಟಿದ್ದರು. ಇದು ಚೀನಾದಲ್ಲಿ 28 ವರ್ಷಗಳಲ್ಲೇ ಘೋರ ವಿಮಾನ ದುರಂತ ಎನಿಸಿತ್ತು.