ಟ್ವೆಂಟಿ-20 ಕ್ರಿಕೆಟ್: ಮಹತ್ವದ ಮೈಲಿಗಲ್ಲು ತಲುಪಿದ ಮೊದಲ ಭಾರತೀಯ ವೇಗಿ ಜಸ್ಪ್ರೀತ್ ಬುಮ್ರಾ

Photo: PTI
ಮುಂಬೈ: ಜಸ್ಪ್ರೀತ್ ಬುಮ್ರಾ ಸದ್ಯ ಭಾರತೀಯ ಕ್ರಿಕೆಟ್ನ ಅತ್ಯುತ್ತಮ ಬೌಲರ್ಗಳಲ್ಲಿ ಒಬ್ಬರು. ಮುಂಬೈ ಇಂಡಿಯನ್ಸ್ ವೇಗದ ಬೌಲರ್ ಈ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಐದು ವಿಕೆಟ್ ಗೊಂಚಲನ್ನು ಪಡೆದಿದ್ದಾರೆ. ಮಂಗಳವಾರ ಅವರು ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಟಿ-20 ಕ್ರಿಕೆಟ್ ನಲ್ಲಿ ಮಹತ್ವದ ಮೈಲಿಗಲ್ಲನ್ನು ತಲುಪಿದರು.
ಬುಮ್ರಾ ಅವರು ಸನ್ ರೈಸರ್ಸ್ ವಿರುದ್ಧ ವಾಷಿಂಗ್ಟನ್ ಸುಂದರ್ ಅವರ ಒಂದು ವಿಕೆಟ್ ಅನ್ನು ಮಾತ್ರ ಪಡೆದರು. ಆದರೆ ಆ ಒಂದು ವಿಕೆಟಿನೊಂದಿಗೆ ಅವರು ಟಿ-20 ಕ್ರಿಕೆಟ್ ನಲ್ಲಿ 250 ವಿಕೆಟ್ ಗಳನ್ನು ಪಡೆದ ಮೊದಲ ಭಾರತೀಯ ವೇಗಿ ಎನಿಸಿಕೊಂಡರು. ಇದುವರೆಗೆ ಭಾರತದ ನಾಲ್ವರು ಸ್ಪಿನ್ನರ್ಗಳಾದ ರವಿಚಂದ್ರನ್ ಅಶ್ವಿನ್ (274), ಯಜುವೇಂದ್ರ ಚಹಾಲ್ (271), ಪಿಯೂಷ್ ಚಾವ್ಲಾ (270) ಹಾಗೂ ಅಮಿತ್ ಮಿಶ್ರಾ (262) ಟಿ-20 ಕ್ರಿಕೆಟ್ನಲ್ಲಿ 250 ವಿಕೆಟ್ಗಳ ಗಡಿ ದಾಟಿದ್ದಾರೆ.
ಬುಮ್ರಾ ನಂತರ, ಭುವನೇಶ್ವರ ಕುಮಾರ್ 223 ವಿಕೆಟ್ಗಳೊಂದಿಗೆ ಭಾರತೀಯ ವೇಗಿಗಳಲ್ಲಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
ರಾಹುಲ್ ತ್ರಿಪಾಠಿ 44 ಎಸೆತಗಳಲ್ಲಿ 76 ರನ್ ಗಳಿಸಿ ಮುಂಬೈ ಇಂಡಿಯನ್ಸ್ ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಆರು ವಿಕೆಟ್ಗಳಿಗೆ 193 ರನ್ ಗಳಿಸಲು ಮಾರ್ಗದರ್ಶನ ನೀಡಿದರು. ಇದಕ್ಕೆ ಉತ್ತರವಾಗಿ ಮುಂಬೈ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿ ಪಂದ್ಯವನ್ನು ಮೂರು ರನ್ಗಳಿಂದ ಕಳೆದುಕೊಂಡಿತು.