ಕುನಾಲ್ ಕಾಮ್ರಾ ವೀಡಿಯೊ ಕುರಿತು ವರದಿ ನೀಡದ್ದಕ್ಕೆ ಟ್ವಿಟರ್ ಅಧಿಕಾರಿಗೆ ಮಕ್ಕಳ ಹಕ್ಕುಗಳ ಸಂಸ್ಥೆಯಿಂದ ಸಮನ್ಸ್

ಹೊಸದಿಲ್ಲಿ: ತಮ್ಮ ಸಾಮಾಜಿಕ ತಾಣ ವೇದಿಕೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕನನ್ನೊಳಗೊಂಡ ವಿಡಂಬನಾತ್ಮಕ ವೀಡಿಯೊವನ್ನು ಪೋಸ್ಟ್ ಮಾಡಿದ್ದಕ್ಕಾಗಿ ಕಾಮೆಡಿಯನ್ ಕುನಾಲ್ ಕಾಮ್ರಾ ವಿರುದ್ಧ ಕೈಗೊಂಡ ಕ್ರಮದ ಕುರಿತು ವರದಿಯನ್ನು ಸಲ್ಲಿಸಲು ವಿಫಲವಾದ ಕಾರಣಕ್ಕಾಗಿ ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಟ್ವಿಟರ್ ಇಂಡಿಯಾದ ಸಂವಹನ ನಿರ್ದೇಶಕರಿಗೆ ಸಮನ್ಸ್ ನೀಡಿದೆ ಎಂದು Theindianexpress.com ಬುಧವಾರ ವರದಿ ಮಾಡಿದೆ.
ಬುಧವಾರ ಆಯೋಗದ ಮುಂದೆ ಹಾಜರಾಗುವಂತೆ ಟ್ವಿಟರ್ ಅಧಿಕಾರಿಗೆ ಸೂಚಿಸಲಾಗಿದೆ.
ಮೇ 5 ರಂದು, ಮಕ್ಕಳ ಹಕ್ಕುಗಳ ಸಂಸ್ಥೆಯು ಟ್ವಿಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿಗಾಗಿ ಬಾಲಕನೊಬ್ಬ ಹಾಡಿರುವ ವೀಡಿಯೊವನ್ನು ವ್ಯಂಗ್ಯವಾಡಿದ ಟ್ವೀಟ್ ಅನ್ನು ತಕ್ಷಣವೇ ತೆಗೆದುಹಾಕುವಂತೆ ಕೇಳಿಕೊಂಡಿತ್ತು. ಕಾಮ್ರಾ ತನ್ನ ರಾಜಕೀಯ ಕಾರ್ಯಸೂಚಿಗಳನ್ನು ಹೆಚ್ಚಿಸಲು ವೀಡಿಯೊವನ್ನು ಬಳಸಿದ್ದಾರೆ ಎಂದು ಅದು ಹೇಳಿತ್ತು.
ಮೇ ಮೊದಲ ವಾರದಲ್ಲಿ ಪ್ರಧಾನಿ ಮೋದಿಯವರು ಜರ್ಮನಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಕಾರ್ಯಕ್ರಮವೊಂದರಲ್ಲಿ ಪ್ರಧಾನಿಯನ್ನು ಭೇಟಿಯಾದಾಗ ಬಾಲಕನೊಬ್ಬ ʼಹೇ ಜನ್ಮಭೂಮಿ ಭಾರತ್ʼ ಎಂಬ ದೇಶಭಕ್ತಿ ಗೀತೆಯನ್ನು ಹಾಡಿದ್ದ. ಕಾಮ್ರಾ ಅವರು ತಮ್ಮ ಟ್ವೀಟ್ನಲ್ಲಿ, ಪೀಪ್ಲಿ ಲೈವ್ ಚಲನಚಿತ್ರದ ಬೆಲೆ ಏರಿಕೆಯ ಹಾಡು ಮೆಹೆಂಗಾಯಿ ದಾಯನ್ ಖಾಯೆ ಜಾತ್ ಹೈನ್ ಹಾಡನ್ನು ಎಡಿಟ್ ಮಾಡಲಾದ ವೀಡಿಯೊವನ್ನು ಪೋಸ್ಟ್ ಮಾಡಿದ್ದರು.
ಸದ್ಯ ಆ ವೀಡಿಯೊ ಕುನಾಲ್ ಕಾಮ್ರಾರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಅಲಭ್ಯವಾಗಿದೆ.
ವೀಡಿಯೊದಲ್ಲಿದ್ದ ಮಗುವಿನ ತಂದೆ ಕಮ್ರಾಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು, "ಬಡ ಹುಡುಗನನ್ನು ನಿಮ್ಮ ಹೊಲಸು ರಾಜಕೀಯದಿಂದ ದೂರವಿಡಿ ಮತ್ತು ನಿಮ್ಮ ಕಳಪೆ ಹಾಸ್ಯದಲ್ಲಿ ಕೆಲಸ ಮಾಡಲು ಪ್ರಯತ್ನಿಸಿ." ಎಂದು ಕಿಡಿಕಾರಿದ್ದರು.
ಮೇ 13 ರಂದು, ಮಕ್ಕಳ ಹಕ್ಕುಗಳ ಸಂಸ್ಥೆ ಟ್ವಿಟರ್ ಅಧಿಕಾರಿಗೆ ಸಮನ್ಸ್ ನೀಡಿದ್ದು,
ಈ ಬಗ್ಗೆ ಯಾವುದೇ ವರದಿಯನ್ನು ಸಲ್ಲಿಸಿಲ್ಲ ಎಂದು ಹೇಳಿದೆ. ಟ್ವಿಟರ್ ಭಾರತದಲ್ಲಿ ಕಾರ್ಯನಿರ್ವಹಿಸಬೇಕಾದರೆ ಕಾನೂನನ್ನು ಅನುಸರಿಸಬೇಕು ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಪ್ರಿಯಾಂಕ್ ಕಣ್ಣೊಂಗೊ ಹೇಳಿದ್ದಾರೆ.
"ಘಟನೆ ನಡೆದು 15 ದಿನಗಳು ಕಳೆದರೂ ಟ್ವಿಟರ್ ಇನ್ನೂ ನಮಗೆ ಕ್ರಮ ತೆಗೆದುಕೊಂಡ ವರದಿಯನ್ನು ಸಲ್ಲಿಸಿಲ್ಲ" ಎಂದು ಕನ್ನಂಗೊ ದಿ ಇಂಡಿಯನ್ ಎಕ್ಸ್ಪ್ರೆಸ್ಗೆ ತಿಳಿಸಿದರು. “ವೀಡಿಯೊವನ್ನು ತೆಗೆದುಹಾಕಲಾಗಿದೆಯೇ ಎಂದು ಅವರು ನಮಗೆ ತಿಳಿಸಿಲ್ಲ. ಇದು ಟ್ವಿಟರ್ನಲ್ಲಿ ಪ್ರತ್ಯೇಕವಾದ ಪ್ರಕರಣವಲ್ಲ, ಆದರೆ ಪುನರಾವರ್ತಿತ ಘಟನೆಯಾಗಿದೆ." ಎಂದು ಹೇಳಿದ್ದಾರೆ.
ರಾಷ್ಟ್ರೀಯ ಮಕ್ಕಳ ಹಕ್ಕು ಆಯೋಗದ ಸದ್ಯದ ಮುಖ್ಯಸ್ಥ ಈ ಹಿಂದೆ ಬಿಜೆಪಿ ಯೂತ್ ವಿಂಗ್ ನ ಸಕ್ರಿಯ ಸದಸ್ಯರಾಗಿದ್ದರು ಎಂದು scroll.in ವರದಿ ಮಾಡಿದೆ.
NCPCR summons director of Twitter India over Kunal Kamra’s post. Kamra had targeted, morphed a video, and lampooned a child for singing a patriotic song in front of PM Modi. @KanoongoPriyank pic.twitter.com/qCtvCVei2E
— Abhijit Majumder (@abhijitmajumder) May 17, 2022