ಅಮೆರಿಕದ ವಾಪಸಾತಿ ಅಫ್ಘಾನ್ ಸೇನೆಯ ಪತನವನ್ನು ಪ್ರೇರೇಪಿಸಿತು: ವರದಿ
REUTERS
ವಾಷಿಂಗ್ಟನ್, ಮೇ 18: ಕಳೆದ ವರ್ಷ ಅಫ್ಘಾನ್ ನಿಂದ ಅಮೆರಿಕ ಪಡೆಯ ಮತ್ತು ರಕ್ಷಣಾ ಕಾರ್ಯಕರ್ತರ ವಾಪಸಾತಿಯು ಅಫ್ಘಾನ್ ರಾಷ್ಟ್ರೀಯ ರಕ್ಷಣಾ ಮತ್ತು ಭದ್ರತಾ ಪಡೆ(ಎಎನ್ಡಿಎಸ್ಎಫ್)ಯ ಪತನವನ್ನು ಪ್ರಚೋದಿಸುವಲ್ಲಿನ ಏಕೈಕ ಪ್ರಮುಖ ಅಂಶವಾಗಿದೆ ಎಂದು ಅಮೆರಿಕ ಸರಕಾರದ ಅಧೀನದ ಪ್ರಾಧಿಕಾರ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಫ್ಘಾನಿಸ್ತಾನ ಪುನರ್ನಿರ್ಮಾಣಕ್ಕಾಗಿನ ವಿಶೇಷ ಪ್ರಧಾನ ಇನ್ಸ್ಪೆಕ್ಟರ್(ಎಸ್ಐಜಿಎಆರ್) ಸಲ್ಲಿಸಿದ ವರದಿಯಲ್ಲಿ, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಅವರ ಉತ್ತರಾಧಿಕಾರಿ ಜೋ ಬೈಡನ್ ಕೈಗೊಂಡ ನಿರ್ಧಾರಗಳು 2021ರ ಆಗಸ್ಟ್ನಲ್ಲಿ ಅಫ್ಘಾನ್ ಸೇನೆಯ ಪತನ ಮತ್ತು ಆ ದೇಶದ ಮೇಲೆ ತಾಲಿಬಾನ್ ನಿಯಂತ್ರಣಕ್ಕೆ ಕಾರಣವಾಯಿತು ಎಂದು ತಿಳಿಸಲಾಗಿದೆ.
ತಾಲಿಬಾನ್ ಪಡೆಗಳ ವಿರುದ್ಧದ ಹೋರಾಟದಲ್ಲಿ ಅಫ್ಘಾನ್ ಪಡೆಗೆ ನೆರವಾಗಲು ಅಮೆರಿಕ ತನ್ನ ಸೇನೆಯನ್ನು 2022ರಲ್ಲಿ ಅಫ್ಘಾನ್ಗೆ ರವಾನಿಸಿದೆ ಮತ್ತು ಅಂದಿನಿಂದ ಸುಮಾರು 90 ಮಿಲಿಯನ್ ಡಾಲರ್ನಷ್ಟು ವೆಚ್ಚ ಮಾಡಿದೆ. 2020ರ ಫೆಬ್ರವರಿಯಲ್ಲಿ ಸಹಿ ಹಾಕಲಾದ ಅಮೆರಿಕ-ತಾಲಿಬಾನ್ ಒಪ್ಪಂದದ ಪ್ರಕಾರ, ಟ್ರಂಪ್ ಆಡಳಿತ ಅಫ್ಘಾನ್ನಿಂದ ಸೇನೆಯನ್ನು ಹಿಂಪಡೆಯಲು ಒಪ್ಪಿಕೊಂಡಿತ್ತು. ಒಪ್ಪಂದದ ಬಳಿಕ ಅಮೆರಿಕವು ತಾಲಿಬಾನ್ ನೆಲೆಗಳ ಮೇಲಿನ ವಾಯುದಾಳಿಯನ್ನು ದಿಢೀರನೆ ಮತ್ತು ನಾಟಕೀಯವಾಗಿ ಕಡಿಮೆಗೊಳಿಸಿದ್ದು ಇದರಿಂದ ಅಫ್ಘಾನ್ ಪಡೆಯ ಕೈಕಟ್ಟಿದಂತಾಯಿತು. ತಮ್ಮನ್ನು ನಡುನೀರಲ್ಲಿ ಕೈಬಿಡಲಾಗಿದೆ ಎಂಬ ಭಾವನೆ ಅಫ್ಘಾನ್ ಸೇನೆ ಮತ್ತು ಜನರಲ್ಲಿ ನೆಲೆಯಾಗಿ ಅವರ ಆತ್ಮಸ್ಥೈರ್ಯ ಕುಸಿಯಿತು.
ಅಮೆರಿಕ-ತಾಲಿಬಾನ್ ಒಪ್ಪಂದ ಕೆಟ್ಟ ನಂಬಿಕೆಯ ಕೃತ್ಯ ಮತ್ತು ಅಮೆರಿಕವು ಅಫ್ಘಾನಿಸ್ತಾನವನ್ನು ಶತ್ರುಗಳ ಕೈಗೆ ಒಪ್ಪಿಸಿದೆ ಎಂದು ಹಲವು ಅಘ್ಘನ್ನರು ಭಾವಿಸಿದರು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ರಕ್ಷಣಾ ಕಾರ್ಯತಂತ್ರದ ಸಲಹೆ ನೀಡುವ ರಕ್ಷಣಾ ಗುತ್ತಿಗೆದಾರರನ್ನು ಹಿಂದಕ್ಕೆ ಪಡೆದಿದ್ದು ಅಫ್ಘಾನ್ ವಾಯುಪಡೆಯ ಶಕ್ತಿ ಕುಂದಿಸಿತು. ರಕ್ಷಣಾ ಗುತ್ತಿಗೆದಾರರ ನೆರವಿನಲ್ಲಿ ಕಾರ್ಯ ನಿರ್ವಹಿಸುವಂತೆ ವಾಯುಪಡೆಯನ್ನು ರಚಿಸಲಾಗಿತ್ತು. ಆದರೆ ರಕ್ಷಣಾ ಗುತ್ತಿಗೆದಾರರು ನಿರ್ಗಮಿಸುತ್ತಿದ್ದಂತೆಯೇ ವಾಯುಪಡೆಯ ಜಂಘಾಬಲವೇ ಉಡುಗಿ ಹೋಯಿತು. ರಕ್ಷಣಾ ಗುತ್ತಿಗೆದಾರರು ವಾಪಸಾದ ತಿಂಗಳೊಳಗೇ 60%ದಷ್ಟು ಬ್ಲ್ಯಾಕ್ಹಾಕ್ ಹೆಲಿಕಾಪ್ಟರ್ಗಳ ಕಾರ್ಯಾಚರಣೆ ಸ್ಥಗೊತಗೊಂಡಿತ್ತು ಎಂದು ಅಮೆರಿಕ ಮತ್ತು ಅಫ್ಘಾನ್ ಸೇನೆಯ ಮಾಜಿ ಅಧಿಕಾರಿಗಳು ಹೇಳಿರುವುದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.