ಚೀನಾದಿಂದ ಪೆಂಗಾಂಗ್ ಲೇಕ್‍ಗೆ ಮತ್ತೊಂದು ಸೇತುವೆ ನಿರ್ಮಾಣ
![ಚೀನಾದಿಂದ ಪೆಂಗಾಂಗ್ ಲೇಕ್‍ಗೆ ಮತ್ತೊಂದು ಸೇತುವೆ ನಿರ್ಮಾಣ ಚೀನಾದಿಂದ ಪೆಂಗಾಂಗ್ ಲೇಕ್‍ಗೆ ಮತ್ತೊಂದು ಸೇತುವೆ ನಿರ್ಮಾಣ](https://www.varthabharati.in/sites/default/files/images/articles/2022/05/19/335634-1652925146.jpg)
ಹೊಸದಿಲ್ಲಿ: ವಿಶ್ವವಿಖ್ಯಾತ ಪೆಂಗಾಂಗ್ ಲೇಕ್‍ಗೆ ಎರಡನೇ ಸೇತುವೆ ನಿರ್ಮಿಸುವ ಕಾಮಗಾರಿಯನ್ನು ಚೀನಾ ಆರಂಭಿಸಿದೆ.
ಈ ಹೊಸ ಸೇತುವೆ, ಭಾರಿ ಸಶಸ್ತ್ರ ವಾಹನಗಳನ್ನು ತಡೆದುಕೊಳ್ಳಲು ಶಕ್ತವಾಗಿದ್ದು, ಇದೇ ಪ್ರದೇಶದಲ್ಲಿ ಇನ್ನೊಂದು ಸೇತುವೆ ನಿರ್ಮಾಣವನ್ನು ಚೀನಾ ಪೂರ್ಣಗೊಳಿಸಿದೆ ಎಂದು ಭಾರತ ಹೇಳಿದ ಒಂದೇ ತಿಂಗಳಲ್ಲಿ ಮತ್ತೊಂದು ಸೇತುವೆ ನಿರ್ಮಾಣಕ್ಕೆ ಚಾಲನೆ ನೀಡಿದೆ.
ಕಳೆದ ಏಪ್ರಿಲ್‍ನಲ್ಲಿ ಪೂರ್ಣಗೊಂಡ ಅಗಲ ಕಿರಿದಾದ ಸೇತುವೆಯಾದ ಮೊದಲ ಸೇತುವೆಗೆ ಪರ್ಯಾಯವಾಗಿ ಎರಡನೇ ಸೇತುವೆ ನಿರ್ಮಿಸಲಾಗುತ್ತಿದೆ. ಎರಡನೇ ಸೇತುವೆ ನಿರ್ಮಾಣಕ್ಕೆ ಅಗತ್ಯವಾದ ಕ್ರೇನ್‍ನಂಥ ನಿರ್ಮಾಣ ಸಲಕರಣೆಗಳನ್ನು ಒಯ್ಯಲು ಒಂದನೇ ಸೇತುವೆ ಬಳಸಲಾಗುತ್ತಿದೆ ಎಂದು ಇತ್ತೀಚಿನ ಹೈ ರೆಸಲ್ಯೂಶನ್ ಚಿತ್ರಗಳನ್ನು ವಿಶ್ಲೇಷಿಸಿರುವ ತಜ್ಞರು ಹೇಳಿದ್ದಾರೆ.
ಆಯಕಟ್ಟಿನ ಪ್ರದೇಶವಾದ ಪೆಂಗಾಂಗ್ ಲೇಕ್‍ನ ಉತ್ತರ ಹಾಗೂ ದಕ್ಷಿಣ ದಂಡೆಗಳನ್ನು ಮೊದಲ ಸೇತುವೆ ಸಂಪರ್ಕಿಸುತ್ತದೆ. ಈ ಪ್ರದೇಶ 60 ವರ್ಷಗಳಿಂದ ಚೀನಾದ ಅಕ್ರಮ ಸ್ವಾಧೀನದಲ್ಲಿರುವ ಪ್ರದೇಶದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ ಎಂದು ಭಾರತ ಹೇಳಿತ್ತು. ಇಂಥ ಅಕ್ರಮ ಅತಿಕ್ರಮಣವನ್ನು ನಾವು ಒಪ್ಪುವುದಿಲ್ಲ ಎಂದು ಸಚಿವಾಲಯದ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದರು.
"ಉಪಗ್ರಹ ಚಿತ್ರದ ವಿಶ್ಲೇಷಣೆ ಮಾಡಿದಾಗ, ಮೊದಲ ಸೇತುವೆಯ ಕಾಮಗಾರಿ ಏಪ್ರಿಲ್‍ನಲ್ಲಿ ಮುಗಿದಿದೆ ಎಂದು ತಿಳಿದುಬರುತ್ತದೆ. ಇಡೀ ಯೋಜನೆಯ ಸಿದ್ಧತೆಗೆ ಬೆಂಬಲವಾಗಿರುವ ಕ್ರೇನ್‍ಗಳು ಈ ಮೊದಲು ಕೂಡಾ ಈ ಜಾಗದಲ್ಲಿ ಕಂಡುಬಂದಿವೆ" ಎಂದು ಇಂಟೆಲ್ ಲ್ಯಾಬ್‍ನ ವಿಶ್ಲೇಷಕ ಡೆಮೀನ್ ಸೈಮನ್ ಹೇಳಿದ್ದಾರೆ.
ಎರಡನೇ ಸೇತುವೆ ಅತ್ಯಾಧುನಿಕ ಹಂತದ್ದಾಗಿದ್ದು, ಗಟ್ಟಿಯಾದ ಅಡಿಪಾಯ ಮತ್ತು ಸ್ತಂಭಗಳು ಮೊದಲ ಸೇತುವೆಯ ಪಕ್ಕದಲ್ಲಿ ಕಂಡುಬರುತ್ತಿವೆ ಎಂದು ಸೈಮನ್ ಹೇಳಿದ್ದಾರೆ. ಎರಡು ಸೇತುವೆಗಳ ನಡುವೆ ದೋಣಿಗಳ ಓಡಾಟಕ್ಕೆ ಸಾಕಷ್ಟು ಸ್ಥಳಾವಕಾಶ ಇಡಲಾಗಿದೆ ಎಂದು ಅವರು ವಿವರಿಸಿದ್ದಾರೆ.