ಹರ್ಯಾಣ: ರಸ್ತೆ ಬದಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಟ್ರಕ್, ಮೂವರು ಮೃತ್ಯು

ಚಂಡೀಗಢ: ಹರ್ಯಾಣದ ಜಜ್ಜರ್ ಜಿಲ್ಲೆಯಲ್ಲಿ ಟ್ರಕ್ ವೊಂದು ನಿಯಂತ್ರಣ ತಪ್ಪಿ ರಸ್ತೆ ಬದಿ ಮಲಗಿದ್ದ ವಲಸೆ ಕಾರ್ಮಿಕರ ಮೇಲೆ ಹರಿದ ಪರಿಣಾಮವಾಗಿ ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದು, 11 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.
ಆಸೋಧ ಟೋಲ್ ಪ್ಲಾಝಾದಿಂದ ಸುಮಾರು 2 ಕಿ.ಮೀ. ದೂರದಲ್ಲಿರುವ ಕುಂಡ್ಲಿ-ಮನೇಸರ್-ಪಲ್ವಾಲ್ ಎಕ್ಸ್‌ಪ್ರೆಸ್‌ವೇಯಲ್ಲಿ ಗುರುವಾರ ಮುಂಜಾನೆ ಈ ಘಟನೆ ನಡೆದಿದೆ.
ಸಮೀಪದ ಸೇತುವೆ ನಿರ್ಮಾಣ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 18 ಕಾರ್ಮಿಕರು ಎಕ್ಸ್‌ಪ್ರೆಸ್‌ವೇ ಪಕ್ಕದಲ್ಲಿ ಮಲಗಿದ್ದಾಗ ಟ್ರಕ್ ನಿಯಂತ್ರಣ ತಪ್ಪಿ ಅವರ ಮೇಲೆ ಹರಿದಿದೆ.
ಮೂವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹನ್ನೆರಡು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಹತ್ತು ಜನರನ್ನು ರೋಹ್ಟಕ್‌ನ ಪಿಜಿಐಎಂಎಸ್‌ಗೆ ಕಳುಹಿಸಲಾಗಿದೆ" ಎಂದು ಎಂದು ಹಿರಿಯ ಪೊಲೀಸ್ ಅಧಿಕಾರಿ ಅಮಿತ್ ಯಶವರ್ಧನ್ ತಿಳಿಸಿದ್ದಾರೆ.
ಪಲ್ಟಿಯಾದ ಟ್ರಕ್ ಹಾಗೂ ವಲಸೆ ಕಾರ್ಮಿಕರ ಮೃತದೇಹದ ದೃಶ್ಯ ಭಯಾನಕವಾಗಿತ್ತು.
"ಕಾರ್ಮಿಕರ ಹೆಸರನ್ನು ಇನ್ನೂ ದೃಢೀಕರಿಸಲಾಗಿಲ್ಲ, ಆದರೆ ಅವರು ಉತ್ತರ ಪ್ರದೇಶದ ಎರಡು ಜಿಲ್ಲೆಗಳಿಂದ ಬಂದವರು ಎಂದು ನಮಗೆ ಗೊತ್ತಾಗಿದೆ" ಎಂದು ಪೊಲೀಸ್ ಅಧಿಕಾರಿ ಹೇಳಿದರು.







