1000 ರೂ. ಗಡಿ ದಾಟಿದ ಗೃಹಬಳಕೆಯ ಸಿಲಿಂಡರ್ ಬೆಲೆ
ಪ್ರತಿ ಅಡುಗೆ ಅನಿಲ ಎಲ್‌ಪಿಜಿ ಗೆ 3:50 ರೂ. ಹೆಚ್ಚಳ

ಹೊಸದಿಲ್ಲಿ: ಗೃಹಬಳಕೆಯ ಅಡುಗೆ ಅನಿಲ ಎಲ್‌ಪಿಜಿ (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಬೆಲೆಯನ್ನು ಗುರುವಾರ ಪ್ರತಿ ಸಿಲಿಂಡರ್‌ಗೆ 3.50 ರೂ.ಹೆಚ್ಚಿಸಲಾಗಿದೆ. ಮೇ ತಿಂಗಳಲ್ಲಿ ಇದು ಎರಡನೇ ಏರಿಕೆಯಾಗಿದೆ. ಈ ಮೂಲಕ ಎಲ್‌ಪಿಜಿ ಬೆಲೆ 1,000 ರೂ.ಗಡಿ ದಾಟಿದೆ.
ರಾಜ್ಯ ಇಂಧನ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ ಈಗ 14.2 ಕೆಜಿ ಸಿಲಿಂಡರ್‌ಗೆ 1,003 ರೂ. ಆಗಿದೆ.
ಮೇ 7 ರಂದು ಸಿಲಿಂಡರ್‌ಗೆ 50 ರೂ.ಹೆಚ್ಚಳದ ಹಿನ್ನೆಲೆಯಲ್ಲಿ ಈ ಏರಿಕೆ ಕಂಡುಬಂದಿದೆ. ಅದಕ್ಕೂ ಮೊದಲು ಮಾರ್ಚ್ 22 ರಂದು 50 ರೂ. ಹೆಚ್ಚಿಸಲಾಗಿತ್ತು.
ಮೇ 1 ರಂದು, 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ರೂ. 102.50 ಹೆಚ್ಚಿಸಲಾಗಿದ್ದು, ಈ ಮೂಲಕ ಸಿಲಿಂಡರ್ ಒಟ್ಟು ಬೆಲೆ 2,355.50 ರೂ. ತಲುಪಿದೆ.
ದಿಲ್ಲಿಯಲ್ಲಿ, 19 ಕೆಜಿ ವಾಣಿಜ್ಯ ಬಳಕೆಯ ಸಿಲಿಂಡರ್‌ನ ಬೆಲೆ ಈಗ 2,355.50 ರೂ. ಆಗಿದ್ದರೆ, ಮುಂಬೈನಲ್ಲಿ ಬೆಲೆ 2,307 ರೂ. ಆಗಿದೆ.
ಹಲವಾರು ರಾಜ್ಯಗಳಲ್ಲಿ ಇಂಧನ ದರಗಳು ಪ್ರತಿ ಲೀಟರ್‌ಗೆ ರೂ. 100 ಕ್ಕಿಂತ ಹೆಚ್ಚಿರುವಾಗ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಏರಿಕೆಯಾಗುತ್ತಿದೆ.