ಹಿರಿಯ ವಕೀಲರಿಗೆ ಅನಾರೋಗ್ಯ ಹಿನ್ನೆಲೆ: ಜ್ಞಾನವಾಪಿ ಮಸೀದಿ ವಿಚಾರಣೆ ನಾಳೆಗೆ ಮುಂದೂಡಿಕೆ

ಹೊಸದಿಲ್ಲಿ: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ವೀಡಿಯೋ ಸರ್ವೆ ನಡೆಸಿದ್ದ ಸಂದರ್ಭದಲ್ಲಿ ʼಶಿವಲಿಂಗʼ ದೊರಕಿದೆ ಎನ್ನಲಾದ ವಿಚಾರಕ್ಕೆ ಸಂಬಂಧಿಸಿದಂತೆ ಸ್ಥಳೀಯ ನ್ಯಾಯಾಲಯದ ತೀರ್ಪಿನ ವಿರುದ್ಧ ಮಸೀದಿ ಆಡಳಿತ ಮಂಡಳಿಯು ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಇಂದು ಪ್ರಕರಣದ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದೀಗ ಹಿಂದೂ ಸಂಘಟನೆಗಳ ಪರ ಹಿರಿಯ ವಕೀಲರು ಅನಾರೋಗ್ಯಕ್ಕೀಡಾಗಿರುವ ಕಾರಣ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.
ಹಿರಿಯ ವಕೀಲರಾದ ಹರಿಶಂಕರ್ ಜೈನ್ ಅನಾರೋಗ್ಯಕ್ಕೀಡಾಗಿದ್ದು, ಪ್ರಕರಣದ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕೆಂದು ಇನೋರ್ವ ವಕೀಲರಾದ ವಿಷ್ಣುಶಂಕರ್ ಜೈನ್ ಮನವಿ ಮಾಡಿದ್ದಾರೆ. ಆದರೆ, ಪ್ರಕರಣಕ್ಕೆ ಸಂಬಂಧಿಸಿದಂತೆ ದೇಶಾದ್ಯಂತ ವಿವಾದಗಳು ಭುಗಿಲೇಳುತ್ತಿದ್ದು, ಈ ಪ್ರಕರಣವನ್ನು ಶೀಘ್ರ ವಿಚಾರಣೆ ನಡೆಸಬೇಕು ಎಂದು ಮಸೀದಿ ಪರ ವಕೀಲ ಹುಝೈಫಾ ಅಹ್ಮದಿ ಮನವಿ ಮಾಡಿದರು. ಕೊನೆಗೆ ವಿಷ್ಣುಶಂಕರ್ ಜೈನ್ ಮನವಿಯನ್ನು ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಪ್ರಕರಣದ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಸುವುದಾಗಿ ತಿಳಿಸಿದೆ.