ಎಸ್. ವೈ.ಎಸ್. 30ನೇ ವರ್ಷಕ್ಕೆ ಪಾದಾರ್ಪಣೆ: ನವೆಂಬರ್‌ನಲ್ಲಿ ಘೋಷಣಾ ಸಮಾವೇಶ

ಮಂಗಳೂರು, ಮೇ 19: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್.ವೈ.ಎಸ್.) 2023ರಲ್ಲಿ ಮೂವತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ಇದರ ಅಂಗವಾಗಿ, ಸಾಮಾಜಿಕ ಪ್ರತಿಬದ್ಧತೆ, ರಾಷ್ಟ್ರೀಯ ಅಖಂಡತೆ ಮತ್ತು ನೈತಿಕ ಆಂದೋಲನವನ್ನು ಮುಖ್ಯ ಧ್ಯೇಯವನ್ನಾಗಿಸಿಕೊಂಡು ಒಂದು ವರ್ಷದ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
'ಎಸ್.ವೈ.ಎಸ್.-30' ಎಂಬ ಹೆಸರಿನಲ್ಲಿ ಮೂವತ್ತನೇ ವರ್ಷಾಚರಣೆ ನಡೆಸಲು ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ಅಧ್ಯಕ್ಷತೆಯಲ್ಲಿ ಮಂಜನಾಡಿ ಅಲ್ ಮದೀನಾ ಸಭಾಂಗಣದಲ್ಲಿ ನಡೆದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಧರಿಸಲಾಯಿತು.
1994ರ ಜನವರಿ 24ರಂದು ಮಂಗಳೂರಿನಲ್ಲಿ ಸಂಘಟನೆ ಜನ್ಮ ತಾಳಿದ್ದು, ಪ್ರತೀ ವರ್ಷ ಜನವರಿ 24ನ್ನು 'ಎಸ್.ವೈ.ಎಸ್. ಡೇ' ಆಗಿ ಆಚರಿಸಲಾಗುವುದೆಂದು ಹಿರಿಯ ನಾಯಕ ಸೈಯದ್ ಇಸ್ಮಾಯೀಲ್ ತಂಙಳ್ ಮದನಿ ಉಜಿರೆ ಸಭೆಯಲ್ಲಿ ಘೋಷಿಸಿದರು.
ಮೂವತ್ತನೇ ವರ್ಷಾಚರಣೆಯ ಘೋಷಣಾ ಸಮಾವೇಶವು 2022 ನವೆಂಬರ್ 25, 26 ದಿನಾಂಕಗಳಲ್ಲಿ ಶಿಮೊಗ್ಗದಲ್ಲಿ ನಡೆಯಲಿದ್ದು, ರಾಜ್ಯದ ಎಲ್ಲಾ ಬ್ರಾಂಚ್‌ಗಳಿಂದ ಆಯ್ದ ಮೂರು ಸಾವಿರ ಪ್ರತಿನಿಧಿಗಳು ಭಾಗವಹಿಸಲಿರುವರು.
ಉದ್ಘಾಟನಾ ಸಮಾವೇಶವು 2023ರ ಜನವರಿ 24ರಂದು ಬೆಂಗಳೂರಿನಲ್ಲಿ ಹಾಗೂ ಸಮಾರೋಪ ಸಂಗಮವು 2024 ಜನವರಿ 24ರಂದು ಬುಧವಾರ ಮಂಗಳೂರಿನಲ್ಲಿ ನಡೆಯಲಿದೆ. ಈ ನಡುವೆ ಜಾರಿಗೊಳಿಸಲಿರುವ 30 ಅಂಶ ಕಾರ್ಯಕ್ರಮಗಳ ಯೋಜನೆ ಸಿದ್ಧಪಡಿಸಲು ಪ್ಲಾನಿಂಗ್ ಸಮಿತಿಗೆ ರೂಪುಕೊಡಲಾಯಿತು.
ಹಿರಿಯ ನಾಯಕ ಪಟ್ಟೋರಿ ಉಸ್ಮಾನ್ ಸಅದಿ ಸಭೆಯನ್ನು ಉದ್ಘಾಟಿಸಿದರು. ಜಿ.ಎಂ.ಕಾಮಿಲ್ ಸಖಾಫಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಕಾರ್ಯದರ್ಶಿಗಳಾದ ಕೆಕೆಎಂ ಕಾಮಿಲ್ ಸಖಾಫಿ, ಅಬ್ದುಲ್ ಹಮೀದ್ ಬಜ್ಪೆ, ಬಿ.ಜಿ.ಹನೀಫ್ ಹಾಜಿ ಉಳ್ಳಾಲ, ಖಾಸಿಂ ಪದ್ಮುಂಜ, ಹಂಝ ನೆಲ್ಲಿಹುದಿಕೇರಿ, ಇಸಾಬಾ ರಾಜ್ಯ ನಿರ್ದೇಶಕ ಇಕ್ಬಾಲ್ ಬಪ್ಪಳಿಗೆ, ರಾಜ್ಯ ಸಂಚಾಲಕ ಸಿದ್ದೀಕ್ ಕೆ.ಎಂ.ಮೋಂಟುಗೋಳಿ ಮುಂತಾದವರು ವಿಷಯ ಮಂಡಿಸಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಸ್ವಾಗತಿಸಿದರು. ಸಾಂತ್ವನ ಕಾರ್ಯದರ್ಶಿ ಬಶೀರ್ ಸಅದಿ ಬೆಂಗಳೂರು ವಂದಿಸಿದರು.







