ಶಾಲೆಗೆ ಬುತ್ತಿಯಲ್ಲಿ ʼಬೀಫ್ʼ ಕೊಂಡೊಯ್ದದ್ದಕ್ಕೆ ಮುಖ್ಯಶಿಕ್ಷಕಿಯನ್ನು ಬಂಧಿಸಿದ ಅಸ್ಸಾಂ ಪೊಲೀಸರು !

ಸಾಂದರ್ಭಿಕ ಚಿತ್ರ
ಗುವಾಹಟಿ: ಅಸ್ಸಾಂನ ಗೋಲ್ಪಾರಾದ ಶಾಲೆಯೊಂದರ ಮುಖ್ಯೋಪಾಧ್ಯಾಯಿನಿಯನ್ನು ಮಧ್ಯಾಹ್ನದ ಊಟಕ್ಕೆ ಬುತ್ತಿಯಲ್ಲಿ ಗೋಮಾಂಸ ಖಾದ್ಯ ಕೊಂಡೊಯ್ದ ಆರೋಪದ ಮೇಲೆ ಅಸ್ಸಾಂ ಪೊಲೀಸರು ಬಂಧಿಸಿದ್ದಾರೆ ಎಂದು thewire.in ವರದಿ ಮಾಡಿದೆ.
ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸಲಾಗಿಲ್ಲ, ಆದರೆ 2021 ರಲ್ಲಿ ತಂದ ಹೊಸ ಕಾನೂನಿನ ಅನ್ವಯ ಹಿಂದೂಗಳು, ಜೈನರು ಮತ್ತು ಸಿಖ್ಖರು ಬಹುಸಂಖ್ಯಾತರಾಗಿರುವ ರಾಜ್ಯದ ಭಾಗಗಳಲ್ಲಿ ಅಥವಾ ದೇವಸ್ಥಾನ ಅಥವಾ ವೈಷ್ಣವ ಮಠಗಳ ಐದು ಕಿಲೋಮೀಟರ್ ವ್ಯಾಪ್ತಿಯೊಳಗೆ ಗೋಹತ್ಯೆ ಮತ್ತು ಗೋಮಾಂಸ ಮಾರಾಟವನ್ನು ನಿಷೇಧಿಸುತ್ತದೆ.
ಅಸ್ಸಾಂ ಜಾನುವಾರು ಸಂರಕ್ಷಣಾ ಕಾಯ್ದೆ, 2021 ರ ತಿದ್ದುಪಡಿಯ ಪ್ರಕಾರ, ಆರೋಪಿಯ ಮನೆಗೆ ಪ್ರವೇಶಿಸಲು ಮತ್ತು ಕಳೆದ ಆರು ವರ್ಷಗಳಲ್ಲಿ ʼಅಕ್ರಮ ಜಾನುವಾರು ವ್ಯಾಪಾರʼ ದಿಂದ ಗಳಿಸಿದ ಹಣದಿಂದ ಗಳಿಸಿದ ಆಸ್ತಿಗಳನ್ನು ಪರಿಶೀಲಿಸಲು, ಶೋಧಿಸಲು ಮತ್ತು ವಶಪಡಿಸಿಕೊಳ್ಳಲು ಪೊಲೀಸರಿಗೆ ಅಧಿಕಾರ ನೀಡುತ್ತದೆ.
ಬಂಧಿತರನ್ನು ಗೋಲ್ಪುರ್ನ ಲಖಿಪುರ್ ಪ್ರದೇಶದ ಹುರ್ಕಾಚುಂಗಿ ಮಿಡಲ್ ಇಂಗ್ಲಿಷ್ ಶಾಲೆಯ ಮುಖ್ಯೋಪಾಧ್ಯಾಯಿನಿ ದಲಿಮಾ ನೆಸ್ಸಾ ಎಂದು ಗುರುತಿಸಲಾಗಿದೆ. ಶಾಲಾ ಆಡಳಿತ ಸಮಿತಿ ನೀಡಿದ ದೂರಿನ ಆಧಾರದ ಮೇಲೆ 56 ವರ್ಷದ ಮುಖ್ಯೋಪಾಧ್ಯಾಯಿನಿಯನ್ನು ಬಂಧಿಸಲಾಗಿದೆ ಎಂದು Indianexpress.com ವರದಿ ಮಾಡಿದೆ.
"ಶಾಲೆಯಲ್ಲಿ ಕಾರ್ಯಕ್ರಮವಿದ್ದ ಮೇ 14ರಂದು ನೆಸ್ಸಾ ಮಧ್ಯಾಹ್ನದ ಊಟಕ್ಕೆ ಗೋಮಾಂಸ ತಂದಿದ್ದರು. ಮುಖ್ಯೋಪಾಧ್ಯಾಯಿನಿ ಗೋಮಾಂಸ ಬಡಿಸಿದ ಸಿಬ್ಬಂದಿಗಳು "ಅಸ್ವಸ್ಥತೆ" ಅನುಭವಿಸಿದ್ದಾರೆ ಮತ್ತು ʼಎರಡೂ ಧಾರ್ಮಿಕ ಸಮುದಾಯಗಳುʼ ಘಟನೆಯಿಂದ ಅಸಮಾಧಾನಗೊಂಡಿದೆ" ಎಂದು ಸಮಿತಿಯು ದೂರಿನಲ್ಲಿ ತಿಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ನೆಸ್ಸಾ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153A (ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು) ಮತ್ತು 295A (ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಮುಖ್ಯೋಪಾಧ್ಯಾಯಿನಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಅಸ್ಸಾಂನಲ್ಲಿ ಗೋಮಾಂಸವನ್ನು ನಿಷೇಧಿಸುವ ಕಾನೂನು ಹೊಸದಾದರೂ, 2016 ರಲ್ಲಿ ಭಾರತೀಯ ಜನತಾ ಪಕ್ಷವು ಅಧಿಕಾರಕ್ಕೆ ಬಂದ ನಂತರ ಗೋಮಾಂಸ ಹೊಂದಿದ್ದಕ್ಕಾಗಿ ಬಂಧಿಸುವುದು ಇದು ಮೊದಲೇನಲ್ಲ. 2017 ರಲ್ಲಿ, ಅಪ್ರಾಪ್ತ ವಯಸ್ಕ ಸೇರಿದಂತೆ ಮೂವರು ಮುಸ್ಲಿಮರನ್ನು ಬಂಧಿಸಲಾಗಿತ್ತು ಎಂದು ದಿ ವೈರ್ ವರದಿ ಮಾಡಿದೆ.