ಭಾಷಣದಲ್ಲಿ ʼಇರಾಕ್ ಮೇಲಿನ ದಾಳಿ ತಪ್ಪು ಮತ್ತು ಅನಾಗರಿಕʼ ಎಂದು ಬಳಿಕ ʼಉಕ್ರೇನ್ʼ ಎಂದು ತಿದ್ದಿಕೊಂಡ ಜಾರ್ಜ್ ಬುಷ್
"ಕೊನೆಗೂ ಸತ್ಯ ಹೊರಬಂದಿದೆ" ಎಂದ ನೆಟ್ಟಿಗರು
Photo: Twitter/Screengrab
ವಾಷಿಂಗ್ಟನ್: ಅಮೇರಿಕಾದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್ ಅವರು ಇರಾಕ್ ಮೇಲಿನ ದಾಳಿಯನ್ನು 'ಸಂಪೂರ್ಣವಾಗಿ ತಪ್ಪು ಮತ್ತು ಅನಾಗರಿಕ' ಎಂದು ಹೇಳಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಉಕ್ರೇನ್ ಮೇಲೆ ರಷ್ಯಾ ಆಕ್ರಮಣದ ಬಗ್ಗೆ ಮಾತನಾಡುತ್ತಿದ್ದ ಬುಷ್, ಈ ಮಧ್ಯೆ ಇರಾಕ್ ಮೇಲೆ ಅಮೆರಿಕ ನಡೆಸಿದ ದಾಳಿ ಅನಾಗರಿಕ ಎಂದು ಹೇಳಿದ್ದಾರೆ. ಆದರೆ, ಕೂಡಲೇ ತನ್ನ ಹೇಳಿಕೆ ಬದಲಿಸಿದ ಬುಷ್, ತಾನು ಉಕ್ರೇನ್ ಮೇಲೆ ರಷ್ಯಾ ನಡೆಸಿದ ದಾಳಿಯ ಬಗ್ಗೆ ಮಾತನಾಡುತ್ತಿದ್ದೇನೆ ಎಂದು ಸಮಜಾಯಿಷಿ ನೀಡಿದ್ದಾರೆ. ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅವರ ಹೇಳಿಕೆ ಭಾರೀ ಟ್ರೋಲ್ ಆಗುತ್ತಿದೆ. ಕೊನೆಗೂ ಸತ್ಯ ಹೊರ ಬಂದಿದೆ ಎಂದು ಹಲವರು ಕಾಮೆಂಟ್ ಮಾಡುತ್ತಿದ್ದಾರೆ.
"ಅಪರಾಧಿ ಪ್ರಜ್ಞೆಯು ಯಾರನ್ನೂ ಸತ್ಯ ಹೇಳುವವರನ್ನಾಗಿಸಬಹುದು. ಹೌದು ಇದು ಬಾಯಿತಪ್ಪಿ ಬಂದಿರಬಹುದು. ಆದರೆ, ಹೃದಯದಾಳದಲ್ಲಿ ಇದು ಸತ್ಯ ಎಂದು ಅವರನ್ನು ಕಾಡುತ್ತಿರಬಹುದು. ಆ ಧ್ವನಿ ಅವರನ್ನು ಯಾವತ್ತೂ ಬಿಡುವುದಿಲ್ಲ" ಎಂದು ಟ್ವಿಟರ್ ಬಳಕೆದಾರರೋರ್ವರು ಕಾಮೆಂಟ್ ಮಾಡಿದ್ದಾರೆ.
2003 ರಲ್ಲಿ, ಬುಷ್ ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷರಾಗಿದ್ದಾಗ, ಇರಾಕ್ನಲ್ಲಿ ಸಾಮೂಹಿಕ ವಿನಾಶಕಾರಿ ಶಸ್ತ್ರಾಸ್ತ್ರಗಳಿದೆಯೆಂದು ಆರೋಪಿಸಿ ಇರಾಕ್ ಮೇಲೆ ಅಮೇರಿಕಾ ಭಾರೀ ಆಕ್ರಮಣವನ್ನು ನಡೆಸಿತ್ತು. ಆದರೆ, ಅಮೇರಿಕಾ ಆರೋಪಿಸಿದ ಯಾವೊಂದು ಶಸ್ತ್ರಾಸ್ತ್ರಗಳೂ ಇರಾಕಿನಲ್ಲಿ ಪತ್ತೆಯಾಗಿರಲಿಲ್ಲ. ಇರಾಕಿನ ಮೇಲೆ ಅಮೇರಿಕ ನಡೆಸಿದ ಸುದೀರ್ಘ ದಾಳಿಯಲ್ಲಿ ಲಕ್ಷಾಂತರ ಅಮಾಯಕ ಇರಾಕಿಯನ್ನರು ಮೃತಪಟ್ಟಿದ್ದರು. ಇರಾಕಿನ ವ್ಯವಸ್ಥೆಯನ್ನೇ ಅಮೇರಿಕಾದ ಈ ಆಕ್ರಮಣವು ಬುಡಮೇಲುಗೊಳಿಸಿತ್ತು.
Speaking in Dallas this afternoon, former President George. W Bush made a significant verbal slip-up while discussing the war in Ukraine.
— Michael Williams (@michaeldamianw) May 19, 2022
He tried referencing what he described as the “wholly unjustified and brutal invasion” — but said Iraq, instead of Ukraine. pic.twitter.com/tw0VNJzKmE