ಉಡುಪಿ: ಬಡತನದ ನಡುವೆಯೂ ಟಾಪರ್ ಆಗಿ ಮೂಡಿಬಂದ ಗಾಯತ್ರಿ!
ಉಡುಪಿ, ಮೇ ೧೯: ತಂದೆ ಗಾರೆ ಕೆಲಸ ಮಾಡಿದರೆ ತಾಯಿ ಬೀಡಿ ಕಟ್ಟುತ್ತಿದ್ದರು. ಇಂತಹ ಬಡತನದಲ್ಲೂ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ಗಾಯತ್ರಿ, ಟಾಪರ್ ಆಗಿ ಮೂಡಿ ಬರುವ ಮೂಲಕ ಮಹತ್ತರ ಸಾಧನೆ ಮಾಡಿದ್ದಾರೆ.
ತಂದೆ ಪ್ರಕಾಶ್ ದೇವಾಡಿಗ ಗಾರೆ ಕೆಲಸ ಮಾಡುವ ಬಡ ಕುಟುಂಬದಿಂದ ಬಂದ ಪ್ರತಿಭೆ ಈಕೆ. ತಾಯಿ ವಸಂತಿ ದೇವಾಡಿಗ ಬೀಡಿ ಕಟ್ಟುವ ಮೂಲಕ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಗಾರೆ ಕೆಲಸ ಮಾಡಿ ಬೇರೆಯವರಿಗೆ ಮನೆ ಕಟ್ಟಿಕೊಡುತ್ತಿದ್ದ ತಂದೆ, ಬಡತನದಲ್ಲೂ ಮಗಳಿಗೆ ಉತ್ತಮ ಶಿಕ್ಷಣಕ್ಕೆ ವ್ಯವಸ್ಥೆ ನೀಡಿದ್ದಾರೆ. ಈಕೆಯ ಸಹೋದರ ಕೂಡ ಕೂಲಿ ಕೆಲಸ ಮಾಡಿಕೊಂಡಿದ್ದಾರೆ.
ಸಾಧನೆ ಬಗ್ಗೆ ಪ್ರತಿಕ್ರಿಯಿಸಿದ ಗಾಯತ್ರಿ, 625 ಅಂಕ ಪಡೆಯಬೇಕೆಂಬ ಕನಸು ಇತ್ತು. ಇದಕ್ಕೆ ನನ್ನ ಸಿನಿಯರ್ ಸಮತಾ ಸ್ಪೂರ್ತಿಯಾಗಿದ್ದರು. ಬೆಳಗ್ಗೆ 5 ಗಂಟೆ ಎದ್ದು ಶಾಲೆಗೆ ಹೋಗುವವರೆಗೆ ಓದುತ್ತಿದ್ದೆ. ಸಂಜೆ ಮನೆಗೆ ಬಂದು ಓದುತ್ತಿದೆ. ಟಿವಿಯಲ್ಲಿ ಸುದ್ದಿ ನೋಡುತ್ತಿದ್ದೆ. ಅದಕ್ಕೆ ಶಿಕ್ಷಕರು ನಮಗೆ ತುಂಬಾ ಪ್ರೋತ್ಸಾಹ ನೀಡಿದ್ದರು ಎಂದರು.
ನಮ್ಮ ಸರಕಾರಿ ಶಾಲೆ ಯಾವುದೇ ಖಾಸಗಿ ಶಾಲೆಗೆ ಕಡಿಮೆ ಇಲ್ಲದಂತೆ ನಮಗೆ ಶಿಕ್ಷಣ ನೀಡಿದೆ. ಅದು ನಮಗೆ ಹೆಮ್ಮೆ ಎನಿಸುತ್ತದೆ. ನಾವು ಮುಂದೆ ಸೈನ್ಸ್ ತೆಗೆದು ಹೃದ್ರೋಗ ತಜ್ಞೆ ಆಗುವ ಗುರಿ ಹೊಂದಿದ್ದೇನೆ. ಪ್ರಸ್ತುತ ಹೃದ್ರೋಗಗಳು ಹೆಚ್ಚುತ್ತಿದ್ದು, ತಜ್ಞರ ಸಂಖ್ಯೆ ಕಡಿಮೆ ಇದೆ. ಆ ಕಾರಣಕ್ಕೆ ವೈದ್ಯೆಯಾಗಿ ಉತ್ತಮ ಜನ ಸೇವೆ ಮಾಡಬೇಕೆಂದಿದ್ದೇನೆ ಎಂದು ಅವರು ಹೇಳಿದರು.