ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆ ಶೇ.89.46 ಫಲಿತಾಂಶ
ಉಡುಪಿ : ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಶೇ.೮೯.೪೬ ಫಲಿತಾಂಶ ಪಡೆದಿದ್ದು, ಸರಕಾರಿ ಶಾಲೆಯ ನಾಲ್ವರು ಸೇರಿದಂತೆ ಒಟ್ಟು ಐದು ಮಂದಿ ವಿದ್ಯಾರ್ಥಿಗಳು ಗರಿಷ್ಠ ೬೨೫ಕ್ಕೆ ೬೨೫ ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾರೆ.
ಪರೀಕ್ಷೆಗೆ ಹಾಜರಾದ ಒಟ್ಟು ೧೩೬೭೨(೬೯೭೧ ಬಾಲಕರು, ೬೭೦೧ ಬಾಲಕಿ ಯರು) ವಿದ್ಯಾರ್ಥಿಗಳ ಪೈಕಿ ೧೨೨೩೧(೫೯೩೮ ಬಾಲಕರು, ೬೨೯೩ ಬಾಲಕಿ ಯರು) ಮಂದಿ ಉತ್ತೀರ್ಣರಾಗಿದ್ದಾರೆ. ಬಾಲಕಿಯರು ಶೇ.೮೫.೧೮ ಮತ್ತು ಬಾಲಕಿಯರು ೯೩.೯೧ರಷ್ಟು ಉತ್ತೀರ್ಣರಾಗುವ ಮೂಲಕ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಪರೀಕ್ಷೆಗೆ ಹಾಜರಾದ ೨೯೭ ಖಾಸಗಿ ವಿದ್ಯಾರ್ಥಿಗಳಲ್ಲಿ ೨೭ ಮಂದಿ ಉತ್ತೀರ್ಣರಾಗುವ ಮೂಲಕ ಶೇ.೯.೦೯ ಫಲಿತಾಂಶ ಪಡೆದಿದ್ದಾರೆ. ೧೬ ಖಾಸಗಿ ಪುನರಾವರ್ತಿತರಲ್ಲಿ ಒಬ್ಬರು ಮಾತ್ರ ಉತ್ತೀರ್ಣರಾಗಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ತಿಳಿಸಿದೆ.
ಉಡುಪಿ ಜಿಲ್ಲೆಯ ೧೩ ಸರಕಾರಿ, ೨ ಅನುದಾನಿತ ಮತ್ತು ೨೬ ಖಾಸಗಿ ಸೇರಿದಂತೆ ಒಟ್ಟು ೪೧ ಶಾಲೆಗಳು ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಶೇ. ೧೦೦ ಫಲಿತಾಂಶ ಪಡೆದುಕೊಂಡಿದೆ. ಉಡುಪಿ ತಾಲೂಕಿನ ಮಲ್ಪೆ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದ ವಿದ್ಯಾರ್ಥಿ ಪುನೀತ್ ನಾಯ್ಕ್, ಉಡುಪಿ ಸರಕಾರಿ ಬಾಲಕಿ ಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿದ್ಯಾರ್ಥಿನಿ ಗಾಯತ್ರಿ, ಕುಂದಾಪುರ ತಾಲೂಕಿನ ಸಿದ್ಧಾಪುರ ಸರಕಾರಿ ಪ್ರೌಢಶಾಲೆಯ ವೈಷ್ಣವಿ ಶೆಟ್ಟಿ, ಕಾಳಾವರ ಸರಕಾರಿ ಕಾಲೇಜು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿನಿ ನಿಶಾ, ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಸಾಂದೀಪನಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಕ್ಷತಾ ೬೨೫ಕ್ಕೆ ೬೨೫ ಅಂಕ ಪಡೆದು ಸಾಧನೆ ಮಾಡಿದ್ದಾರೆ.