ಉಕ್ರೇನ್ ಯುದ್ಧದಿಂದ ಜಾಗತಿಕ ಆಹಾರ ಬಿಕ್ಕಟ್ಟು ಸಾಧ್ಯತೆ: ವಿಶ್ವಸಂಸ್ಥೆ ಎಚ್ಚರಿಕೆ
PHOTOGRAPH:GETTY IMAGES
ನ್ಯೂಯಾರ್ಕ್, ಮೇ 19: ಉಕ್ರೇನ್ ಮೇಲಿನ ರಶ್ಯಾದ ಆಕ್ರಮಣವು ಶೀಘ್ರವೇ ಜಾಗತಿಕ ಆಹಾರ ಬಿಕ್ಕಟ್ಟಿಗೆ ಕಾರಣವಾಗಲಿದೆ ಮತ್ತು ಈ ಸಮಸ್ಯೆ ಹಲವು ವರ್ಷ ಮುಂದುವರಿಯಲಿದೆ ಎಂದು ವಿಶ್ವಸಂಸ್ಥೆ ಎಚ್ಚರಿಸಿದೆ.ಯುದ್ಧದ ಹಿನ್ನೆಲೆಯಲ್ಲಿ ಆಹಾರ ಧಾನ್ಯದ ಬೆಲೆಯೇರಿಕೆಯಿಂದಾಗಿ ಬಡದೇಶಗಳಲ್ಲಿನ ಆಹಾರ ಅಭದ್ರತೆ ಸಮಸ್ಯೆ ಇನ್ನಷ್ಟು ಹದಗೆಟ್ಟಿದೆ. ಉಕ್ರೇನ್ನ ರಫ್ತು ಪ್ರಮಾಣವನ್ನು ಯುದ್ಧದ ಮೊದಲಿನ ಸ್ಥಿತಿಗೆ ತರದಿದ್ದರೆ ಕೆಲವು ದೇಶಗಳಿಗೆ ದೀರ್ಘಾವಧಿಯ ಕ್ಷಾಮ ಎದುರಾಗಬಹುದು ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿಕೆಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ. ಈ ಹಿಂದೆ ಉಕ್ರೇನ್ನಿಂದ ಭಾರೀ ಪ್ರಮಾಣದ ಜೋಳ, ಗೋಧಿ, ಖಾದ್ಯ ತೈಲ ವಿದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ಸಂಘರ್ಷದಿಂದಾಗಿ ಆಹಾರವಸ್ತು ರಫ್ತಿಗೆ ತಡೆಯಾಗಿದೆ. ಇದರಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಧಾನ್ಯದ ದರದಲ್ಲಿ 30% ಹೆಚ್ಚಳವಾಗಿದೆ.
ಕೋವಿಡ್ ಸಾಂಕ್ರಾಮಿಕ, ಹವಾಮಾನ ವೈಪರೀತ್ಯದ ಸಮಸ್ಯೆಯ ಜತೆ ಈಗ ಉಕ್ರೇನ್ನ ಸಂಷರ್ಘವೂ ಸೇರಿಕೊಂಡು ಮಿಲಿಯಾಂತರ ಜನತೆ ಆಹಾರ ಅಭದ್ರತೆಯ ಪ್ರಪಾತದ ಅಂಚಿಗೆ ತಳ್ಳಲ್ಪಟ್ಟಿದ್ದಾರೆ. ಜತೆಗೆ ಅಪೌಷ್ಟಿಕತೆ, ಉಪವಾಸ ಮತ್ತು ಕ್ಷಾಮದ ಸಮಸ್ಯೆಯೂ ಸೇರಿದೆ. ನಾವೆಲ್ಲಾ ಒಗ್ಗೂಡಿ ಕಾರ್ಯನಿರ್ವಹಿಸಿದರೆ ನಮ್ಮ ವಿಶ್ವದಲ್ಲಿನ ಆಹಾರ ಸಾಕಾಗುತ್ತದೆ. ಆದರೆ ಈಗಿನ ಸಂಘರ್ಷದ ಪರಿಸ್ಥಿತಿಗೆ ಅಂತ್ಯಹಾಡದಿದ್ದರೆ ಮುಂದಿನ ದಿನಗಳಲ್ಲಿ ಜಾಗತಿಕ ಆಹಾರದ ಕೊರತೆ ತೀವ್ರಗೊಳ್ಳಲಿದೆ ಎಂದು ಗುಟೆರಸ್ ಹೇಳಿದ್ದಾರೆ. ಉಕ್ರೇನ್ನ ಆಹಾರ ಉತ್ಪಾದನೆಯನ್ನು ಮರು ಸಂಘಟಿಸುವ ಜತೆಗೆ ರಶ್ಯ ಮತ್ತು ಬೆಲಾರಸ್ನ ರಸಗೊಬ್ಬರ ಉತ್ಪನ್ನವನ್ನು ಜಾಗತಿಕ ಮಾರುಕಟ್ಟೆಗೆ ಮರಳಿ ತಲುಪಿಸುವುದು ಈ ಬಿಕ್ಕಟ್ಟಿಗೆ ಏಕೈಕ ಪರಿಣಾಮಕಾರಿ ಪರಿಹಾರವಾಗಿದೆ ಎಂದು ಅವರು ಎಚ್ಚರಿಸಿದ್ದಾರೆ.
ವಿಶ್ವದ ಗೋಧಿ ಬೇಡಿಕೆಯಲ್ಲಿ 30%ದಷ್ಟನ್ನು ರಶ್ಯ ಮತ್ತು ಉಕ್ರೇನ್ ಪೂರೈಸುತ್ತಿದೆ. ಆದರೆ ಯುದ್ಧ ಆರಂಭಗೊಂಡ ಬಳಿಕ ಇದು ಸ್ಥಗಿತಗೊಂಡಿದೆ. ವಿಶ್ವದ ಆಹಾರದ ಬಾಸ್ಕೆಟ್ ಎಂದೇ ಕರೆಯಲಾಗುವ ಉಕ್ರೇನ್ನಿಂದ ಯುದ್ಧಕ್ಕೂ ಮೊದಲು ಪ್ರತೀ ತಿಂಗಳು 4.5 ಮಿಲಿಯನ್ ಟನ್ನಷ್ಟು ಕೃಷಿ ಉತ್ಪನ್ನ ರಫ್ತಾಗುತ್ತಿತ್ತು. ಯುದ್ಧ ಆರಂಭವಾದ ಬಳಿಕ ಈ ಎರಡೂ ದೇಶಗಳ ಆಹಾರ ಉತ್ಪನ್ನ ರಫ್ತು ಪ್ರಕ್ರಿಯೆಗೆ ತಡೆಯಾಗಿರುವುದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಆಹಾರ ಉತ್ಪನ್ನಗಳ ದರ ಗಗನಕ್ಕೇರಿದೆ. ಕಳೆದ ಶನಿವಾರ ಭಾರತವೂ ಗೋಧಿ ರಫ್ತಿನ ಮೇಲೆ ನಿಷೇಧ ವಿಧಿಸಿರುವುದು ಮತ್ತಷ್ಟು ಬೆಲೆಯೇರಿಕೆಗೆ ಕಾರಣವಾಗಿದೆ.ಈ ಹಿಂದಿನ ಸುಗ್ಗಿಯ ಸುಮಾರು 20 ಮಿಲಿಯನ್ ಟನ್ನಷ್ಟು ಆಹಾರ ಧಾನ್ಯ ಈಗಲೂ ಉಕ್ರೇನ್ನ ಗೋದಾಮಿನಲ್ಲಿದ್ದು ಇವನ್ನು ರಫ್ತು ಮಾಡಿದರೆ ಜಾಗತಿಕ ಮಾರುಕಟ್ಟೆಯ ಮೇಲಿನ ಒತ್ತಡ ಗಮನಾರ್ಹ ಮಟ್ಟದಲ್ಲಿ ಕಡಿಮೆಯಾಗಲಿದೆ ಎಂದು ವಿಶ್ವಸಂಸ್ಥೆ ಹೇಳಿದೆ.