ಆರ್ಥಿಕ ಬಿಕ್ಕಟ್ಟು, ರಾಜಕೀಯ ಅಸ್ಥಿರತೆ: ಪಾಕ್ ರೂಪಾಯಿ ತೀವ್ರ ಅಪಮೌಲ್ಯ
ಕರಾಚಿ, ಮೇ 19: ದೇಶಕ್ಕೆ ಎದುರಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ರಾಜಕೀಯ ಅಸ್ಥಿರತೆಯ ಪರಿಣಾಮ ಪಾಕಿಸ್ತಾನದ ರೂಪಾಯಿಯ ಅಪಮೌಲ್ಯೀಕರಣ ಮುಂದುವರಿದಿದ್ದು ಗುರುವಾರ ಅಮೆರಿಕದ ಡಾಲರ್ ಎದುರು ರೂಪಾಯಿಯ ಮೌಲ್ಯ ಸಾರ್ವಕಾಲಿಕ ಕನಿಷ್ಟ ಮೌಲ್ಯ 200 ರೂ.ಗೆ ಕುಸಿದಿದೆ ಎಂದು ವರದಿಯಾಗಿದೆ.
ಮುಕ್ತಮಾರುಕಟ್ಟೆಯಲ್ಲಿ ಕೆಲ ದಿನಗಳಿಂದಲೇ 1 ಡಾಲರ್ಗೆ ಪಾಕಿಸ್ತಾನದ 200 ರೂ. ಮೌಲ್ಯವಿತ್ತು. ಆದರೆ ಗುರುವಾರ ಅಂತರ ಬ್ಯಾಂಕ್ ವಹಿವಾಟಿನಲ್ಲಿ ಕೂಡಾ 200 ರೂ. ಗಡಿ ದಾಟಿದೆ. ಅರ್ಥವ್ಯವಸ್ಥೆಯ ಕುಸಿತವನ್ನು ತಡೆಯಲು ಕೈಗೊಂಡಿರುವ ಕ್ರಮ ಮತ್ತು ಆರ್ಥಿಕತೆಗೆ ಪುನರುಜ್ಜೀವನದ ಹಾದಿ ರೂಪಿಸುವ ಬಗ್ಗೆ ಸರಕಾರ ಹೆಚ್ಚಿನ ಸ್ಪಷ್ಟತೆ ನೀಡುವವರೆಗೆ ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಾ ಸಾಗಲಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಪಾಕಿಸ್ತಾನದ ಇತಿಹಾಸದಲ್ಲೇ ಇದು ಕರಾಳ ದಿನವಾಗಿದೆ. ಕಳಪೆ ಆರ್ಥಿಕ ನಿರ್ವಹಣೆಯಿಂದಾಗಿ ಇಂತಹ ದಿನ ಬರಬಹುದೆಂದು ನಾನೆಂದೂ ನಿರೀಕ್ಷಿಸಿರಲಿಲ್ಲ ಎಂದು ಫಾರೆಕ್ಸ್ ಅಸೋಸಿಯೇಷನ್ ಆಫ್ ಪಾಕಿಸ್ತಾನದ ಪ್ರಧಾನ ಕಾರ್ಯದರ್ಶಿ ಝಾಪರ್ ಪರಾಚ ಹೇಳಿದ್ದಾರೆ. ಡಾಲರ್ ದರದ ಏರಿಕೆಯಿಂದಾಗಿ ನಮ್ಮ ಆಮದುದಾರರು ಹೆಚ್ಚಿನ ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ಆಮದು ನಿರ್ಬಂಧಿಸಲು ಕಂದಾಯ ಇಲಾಖೆ ಶಾಸನಬದ್ಧ ಆದೇಶ ಜಾರಿಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ. 2021ರ ಜುಲೈ 1ರಿಂದ ಪಾಕಿಸ್ತಾನ ರೂಪಾಯಿ ಮೌಲ್ಯದಲ್ಲಿ 27% ಕುಸಿತವಾಗಿದೆ.
ಬೃಹತ್ ಮೊತ್ತದ ಸಾಲ ಮರುಪಾವತಿಸಲು ಬಾಕಿ ಇರುವುದರಿಂದ ಪಾಕಿಸ್ತಾನದ ಚಾಲ್ತಿಖಾತೆ (ಕರೆಂಟ್ ಅಕೌಂಟ್) ಕೊರತೆ ಮತ್ತು ವ್ಯಾಪಾರ ಕೊರತೆ ಅಂಕಿಅಂಶಗಳು ಅತ್ಯಂತ ಕಳವಳಕಾರಿ ಮಟ್ಟಕ್ಕೆ ಇಳಿದಿವೆ. 2019 ಮತ್ತು 2020ರಲ್ಲಿ ಚೀನಾ, ಸೌದಿ ಅರೆಬಿಯಾ ಹಾಗೂ ಜಾಗತಿಕ ಹಣಕಾಸು ಸಂಸ್ಥೆಗಳಿಂದ ಬಿಲಿಯಾಂತರ ಡಾಲರ್ ಸಾಲವನ್ನು ಪಾಕಿಸ್ತಾನ ಪಡೆದಿದೆ. ಈ ಮಧ್ಯೆ, ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್)ನಿಂದ ಪಡೆದ ಸಾಲದ ವಾಯಿದೆಯನ್ನು ಹೆಚ್ಚಿಸುವಂತೆ ಕೋರಿಕೆ ಸಲ್ಲಿಸಿದೆ. ಆದರೆ, ಇಂಧನ ಸಬ್ಸಿಡಿ ಅಂತ್ಯಗೊಳಿಸುವುದು, ತೆರಿಗೆ ಕ್ಷಮಾಧಾನ ಯೋಜನೆ ರದ್ದುಪಡಿಸುವುದು, ವಿದ್ಯುತ್ ದರ ಹೆಚ್ಚಳ ಮತ್ತು ಹೆಚ್ಚುವರಿ ತೆರಿಗೆ ಕ್ರಮಗಳನ್ನು ಜಾರಿಗೊಳಿಸುವ ಷರತ್ತನ್ನು ಐಎಂಎಫ್ ಮುಂದಿರಿಸಿದೆ ಎಂದು ವರದಿಯಾಗಿದೆ.