ನೆಲಸಮ ಕೋರಿಕೆ ವಿರುದ್ಧ ನ್ಯಾಯಾಲಯದ ಮೊರೆ ಹೋದ ಜ್ಞಾನವಾಪಿ ಮಸೀದಿ ಸಮಿತಿ

ಹೊಸದಿಲ್ಲಿ,ಮೇ 19: ಮಸೀದಿಯೊಳಗೆ ನೆಲಸಮ ಕಾರ್ಯಕ್ಕಾಗಿ ಕೋರಿ ಹಿಂದು ಅರ್ಜಿದಾರರು ಸಲ್ಲಿಸಿರುವ ಅರ್ಜಿ ಕುರಿತು ಜ್ಞಾನವಾಪಿ ಮಸೀದಿ ಆಡಳಿತ ಸಮಿತಿಯು ಗುರುವಾರ ವಾರಣಾಸಿ ನ್ಯಾಯಾಲಯದಲ್ಲಿ ಅಫಿಡವಿಟ್ ಅನ್ನು ಸಲ್ಲಿಸಿದೆ. ಅರ್ಜಿದಾರರ ವಿವಾದಾತ್ಮಕ ‘ಶಿವಲಿಂಗ ’ ಹೇಳಿಕೆಗಳನ್ನು ಆಕ್ಷೇಪಿಸಿರುವ ಸಮಿತಿಯು,ಅದನ್ನು ಶಿವಲಿಂಗ ಎಂದು ಕರೆಯುವುದು ಅರ್ಜಿದಾರರು ಅಥವಾ ಕೋರ್ಟ್ ಕಮಿಷನರ್ ಹಕ್ಕುಗಳ ವ್ಯಾಪ್ತಿಯಲ್ಲಿಲ್ಲ ಎಂದು ಹೇಳಿದೆ.
ಮಸೀದಿ ಸಂಕೀರ್ಣದೊಳಗೆ ಹಿಂದು ದೇವತೆಗಳ ವಿಗ್ರಹಗಳಿಗೆ ಪೂಜೆ ಸಲ್ಲಿಸಲು ಹಿಂದು ಅರ್ಜಿದಾರರ ಕೋರಿಕೆಯನ್ನೊಳಗೊಂಡಿರುವ ಪ್ರಕರಣದಲ್ಲಿ ಜ್ಞಾನವಾಪಿ ಮಸೀದಿಯ ಚಿತ್ರೀಕರಣದ ವರದಿಯನ್ನು ಗುರುವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ.
ಕೋರ್ಟ್ ಕಮಿಷನರ್ ವರದಿಯ ಆಧಾರದ ಮೇಲೆ ನಿರ್ಧಾರವೊಂದನ್ನು ತೆಗೆದುಕೊಳ್ಳುವ ಮುನ್ನ ಅರ್ಜಿದಾರರು ಮತ್ತೆ ಅರ್ಜಿಯನ್ನು ಸಲ್ಲಿಸಬಾರದಿತ್ತು ಎಂದು ಅಫಿಡವಿಟ್‌ನಲ್ಲಿ ಹೇಳಿರುವ ಆಡಳಿತ ಸಮಿತಿಯು,ಮಸೀದಿಯ ಗೋಡೆಯನ್ನು ನೆಲಸಮಗೊಳಿಸುವುದು ಮಸೀದಿಯ ಕುಸಿತಕ್ಕೆ ಕಾರಣವಾಗುತ್ತದೆ. ಯಾವುದೇ ನೆಲಸಮ ಕಾರ್ಯಾಚರಣೆಯು ಮುಸ್ಲಿಮರ ಭಾವನೆಗಳಿಗೆ ನೋವನ್ನುಂಟು ಮಾಡುತ್ತದೆ ಮತ್ತು ವಾತಾವರಣವನ್ನು ಕೆಡಿಸುತ್ತದೆ ಎಂದು ತಿಳಿಸಿದೆ.
ಕಾನೂನು ಮತ್ತು ಸುವ್ಯವಸ್ಥೆಯ ಹೊಣೆಗಾರಿಕೆ ನ್ಯಾಯಾಲಯದ್ದಾಗಿದೆ ಎಂದು ಬೆಟ್ಟು ಮಾಡಿರುವ ಅಫಿಡವಿಟ್,ಶಿವಲಿಂಗ ಹೇಳಿಕೆಗಳು ಕಾಲ್ಪನಿಕವಾಗಿವೆ ಎಂದು ಬಣ್ಣಿಸಿದೆ. ಈ ಹೇಳಿಕೆಗಳ ಮೇಲೆ ಆದೇಶಗಳನ್ನು ಹೊರಡಿಸದಂತೆ ಅದು ನ್ಯಾಯಾಲಯವನ್ನು ಕೋರಿಕೊಂಡಿದೆ.
ಸಮೀಕ್ಷಾ ವರದಿಯನ್ನು ಬಿಡುಗಡೆಗೊಳಿಸಲಾಗಿಲ್ಲ,ಹೀಗಾಗಿ ನೆಲಸಮ ಕೋರಿಕೆಯು ಸ್ವೀಕಾರಾರ್ಹವಲ್ಲ ಮತ್ತು ಅರ್ಜಿದಾರರು ಶಿವಲಿಂಗ ಎಂದು ಕರೆಯುವ ಕಾರಂಜಿಯಿಂದ ಎಲ್ಲ ಅಳತೆಗಳನ್ನು ತೆಗೆದುಕೊಳ್ಳಲಾಗಿದ್ದು,ಚಿತ್ರೀಕರಣ ಪ್ರಕ್ರಿಯೆಯು ತಮಗೆ ತೃಪ್ತಿಯನ್ನುಂಟು ಮಾಡಿದೆ ಎಂದು ಎಲ್ಲ ಕಕ್ಷಿದಾರರು ಬಹಿರಂಗವಾಗಿ ಹೇಳಿದ್ದಾರೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಎರಡು ದಿನಗಳಲ್ಲಿ ತಳಅಂತಸ್ತನ್ನೂ ಎರಡು ಬಾರಿ ಚಿತ್ರೀಕರಿಸಲಾಗಿದೆ ಮತ್ತು ಫೋಟೊಗಳನ್ನು ತೆಗೆಯಲಾಗಿದೆ ಎಂದು ಹೇಳಿರುವ ಅಫಿಡವಿಟ್,ನೆಲಸಮ ಕೋರಿಕೆಯನ್ನು ಅಂಗೀಕರಿಸಿದರೆ ಅದು ಆರಾಧನಾ ಸ್ಥಳಗಳ ಕಾಯ್ದೆ,1991ರ ಉಲ್ಲಂಘನೆಯಾಗುತ್ತದೆ ಮತ್ತು ಅಯೋಧ್ಯೆ ದೇಗುಲದ ವಿಚಾರಣೆಯಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವಾಗುತ್ತದೆ ಮತ್ತು ನ್ಯಾಯಾಂಗ ನಿಂದನೆಯೂ ಆಗುತ್ತದೆ ಎಂದು ವಾದಿಸಿದೆ.
ಸಮೀಕ್ಷಾ ವರದಿ ಇನ್ನು ಬಿಡುಗಡೆಯಾಗಿಲ್ಲ,ಆದರೆ ಮಾಧ್ಯಮಗಳು ಚಿತ್ರೀಕರಣ ಪ್ರಕ್ರಿಯೆಯ ದೃಶ್ಯಾವಳಿಗಳನ್ನು ತೋರಿಸಿ ಕಾರಂಜಿಯನ್ನು ಶಿವಲಿಂಗ ಎಂದು ಬಣ್ಣಿಸುತ್ತಿರುವುದು ಆಶ್ಚರ್ಯಕರವಾಗಿದೆ ಎಂದೂ ಅಫಿಡವಿಟ್‌ನಲ್ಲಿ ಹೇಳಲಾಗಿದೆ.
ಮಸೀದಿಯ ಚಿತ್ರೀಕರಣ ನಡೆಸಿದ ತಂಡವು ಸಮೀಕ್ಷಾ ವರದಿಯನ್ನು ಮೊಹರಬಂದ್ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದೆ,ಜೊತೆಗೆ ವೀಡಿಯೊಗಳ ಚಿಪ್ ಮತ್ತು ಚಿತ್ರೀಕರಣದ ಫೋಟೊಗಳನ್ನೂ ಹಸ್ತಾಂತರಿಸಿದೆ ಎಂದು ನ್ಯಾಯಾಲಯದಿಂದ ನೇಮಕಗೊಂಡಿರುವ ಕಮಿಷನರ್ ವಿಶಾಲ ಸಿಂಗ್ ಅವರು ಸುದ್ದಿಸಂಸ್ಥೆಗೆ ತಿಳಿಸಿದರು.
ಈ ನಡುವೆ ಜ್ಞಾನವಾಪಿ ಮಸೀದಿಯ ಚಿತ್ರೀಕರಣವನ್ನು ಪ್ರಶ್ನಿಸಿ ಆಡಳಿತ ಸಮಿತಿಯು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯವು ಸದ್ಯಕ್ಕೆ ಯಾವುದೇ ಆದೇಶವನ್ನು ಹೊರಡಿಸದಂತೆ ವಾರಣಾಸಿ ನ್ಯಾಯಾಲಯಕ್ಕೆ ಗುರುವಾರ ಸೂಚಿಸಿದೆ. ಹಿಂದು ಅರ್ಜಿದಾರರ ಪರ ವಕೀಲರು ವಿಚಾರಣೆಯ ಮುಂದೂಡಿಕೆಗೆ ಕೋರಿಕೊಂಡ ಬಳಿಕ ಸರ್ವೋಚ್ಚ ನ್ಯಾಯಾಲಯವು ತಾನು ಶುಕ್ರವಾರ ಪ್ರಕರಣವನ್ನು ಕೈಗೆತ್ತಿಕೊಳ್ಳುವುದಾಗಿ ತಿಳಿಸಿದೆ.







