ಉಕ್ರೇನ್ ನಲ್ಲಿ ಯುದ್ಧಾಪರಾಧದ ವಿಚಾರಣೆ: ಕ್ಷಮೆ ಯಾಚಿಸಿದ ರಶ್ಯ ಯೋಧ
ಕೀವ್, ಮೇ 19: ಉಕ್ರೇನ್ನ ಕೀವ್ ನ್ಯಾಯಾಲಯದಲ್ಲಿ ಗುರುವಾರ ಆರಂಭವಾದ ಯುದ್ಧಾಪರಾಧ ವಿಚಾರಣೆ ಸಂದರ್ಭ ರಶ್ಯದ ಯೋಧ ವಾದಿಮ್ ಶಿಶಿಮರಿನ್ ಕ್ಷಮೆ ಯಾಚಿಸಿದ್ದು , ತಾನು ಉಕ್ರೇನ್ನ ಪ್ರಜೆಯನ್ನು ಹತ್ಯೆಗೈದ ಬಗ್ಗೆ ವಿವರಿಸಿದ್ದಾನೆ ಎಂದು ವರದಿಯಾಗಿದೆ.
ನೀವು ನನ್ನನ್ನು ಕ್ಷಮಿಸಲು ಸಾಧ್ಯವಾಗದು ಎಂದು ನನಗೆ ತಿಳಿದಿದೆ. ಆದರೂ ನಾನು ಕ್ಷಮೆ ಯಾಚಿಸುತ್ತಿದ್ದೇನೆ ಎಂದು ತಾನು ಹತ್ಯೆಗೈದ ವ್ಯಕ್ತಿಯ ಪತ್ನಿಯನ್ನುದ್ದೇಶಿಸಿ ಶಿಶಿಮರಿನ್ ನ್ಯಾಯಾಲಯದಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ.
‘ಉಕ್ರೇನ್ ಮೇಲೆ ಆಕ್ರಮಣ ಆರಂಭಗೊಂಡ ದಿನ, ಉಕ್ರೇನ್ ನೆಲದಲ್ಲಿ ಬಹುದೂರ ಸಾಗಿ ಬಂದಿದ್ದ ತಮ್ಮ ತಂಡ ರಶ್ಯಕ್ಕೆ ಮರಳಿ ಹೋಗುವ ಧಾವಂತದಲ್ಲಿದ್ದೆವು. ಅಲ್ಲಿದ್ದ ಕಾರೊಂದನ್ನು ಅಪಹರಿಸಿ ಅದರ ಮೂಲಕ ರಶ್ಯ ಗಡಿಯತ್ತ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ 62 ವರ್ಷದ ಉಕ್ರೇನ್ ಪ್ರಜೆಯೊಬ್ಬ ಮೊಬೈಲ್ನಲ್ಲಿ ಮಾತಾಡುತ್ತಾ ನಿಂತಿದ್ದ. ಆತನತ್ತ ಗುಂಡು ಹಾರಿಸುವಂತೆ ಕಾರಿನಲ್ಲಿದ್ದ ಮತ್ತೊಬ್ಬ ರಶ್ಯ ಯೋಧ ನನಗೆ ಆದೇಶಿಸಿದ. ಆತನ ಪರಿಚಯ ತನಗಿರಲಿಲ್ಲ. ಆತ ಮತ್ತೊಮ್ಮೆ ಗಡಸು ಧ್ವನಿಯಲ್ಲಿ ಆದೇಶಿಸಿದಾಗ ಒತ್ತಡಕ್ಕೆ ಸಿಲುಕಿ ತಾನು ಉಕ್ರೇನ್ನ ಪ್ರಜೆಯ ಮೇಲೆ ಹತ್ತಿರದಿಂದ ಗುಂಡು ಹಾರಿಸಿದಾಗ ಆತ ಮರಣ ಹೊಂದಿದ’ಎಂದು ಶಿಶಿಮರಿನ್ ಹೇಳಿಕೆ ನೀಡಿದ್ದಾನೆ. ಯುದ್ಧಾಪರಾಧ ಮತ್ತು ಪೂರ್ವಯೋಜಿತ ಕೊಲೆಯ ಅಪರಾಧಕ್ಕೆ ಶಿಶಿಮರಿನ್ಗೆ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ.
ಅಝೋವ್ಸ್ತಲ್ ಸ್ಥಾವರದಲ್ಲಿ 1,730 ಉಕ್ರೇನ್ ಯೋಧರ ಶರಣಾಗತಿ: ರಶ್ಯ
ಉಕ್ರೇನ್ ನ ಆಯಕಟ್ಟಿನ ಬಂದರು ನಗರ ಮರಿಯುಪೋಲ್ ತನ್ನ ಕೈವಶವಾದ ಬಳಿಕ, ಅಲ್ಲಿನ ಅಝೋವ್ಸ್ತಲ್ ಉಕ್ಕು ಸ್ಥಾವರದೊಳಗೆ ಆಶ್ರಯ ಪಡೆದು ಹೋರಾಟ ಮುಂದುವರಿಸಿದ್ದ ಉಕ್ರೇನ್ ಯೋಧರಲ್ಲಿ ಈ ವಾರ 1,730 ಯೋಧರು ಶರಣಾಗಿದ್ದಾರೆ ಎಂದು ರಶ್ಯದ ರಕ್ಷಣಾ ಇಲಾಖೆ ಗುರುವಾರ ಹೇಳಿದೆ.
ಗುರುವಾರ ಬೆಳಗ್ಗಿನವರೆಗಿನ ಕಳೆದ 24 ಗಂಟೆಯಲ್ಲಿ ಮತ್ತೆ 771 ಉಗ್ರರು(ಉಕ್ರೇನ್ ಯೋಧರು) ಶರಣಾಗಿದ್ದು ಇದರೊಂದಿಗೆ ಈ ವಾರ ಶರಣಾದ ಉಗ್ರರ ಸಂಖ್ಯೆ 1,730ಕ್ಕೆ ಏರಿದೆ. ಇದರಲ್ಲಿ 80 ಗಾಯಾಳುಗಳೂ ಸೇರಿದ್ದಾರೆ ಎಂದು ಹೇಳಿಕೆ ತಿಳಿಸಿದೆ. ಜತೆಗೆ, ಉಕ್ಕಿನ ಸ್ಥಾವರದೊಳಗಿಂದ ಶರಣಾದ ಯೋಧರು ಹೊರಬರುತ್ತಿರುವ ಫೋಟೋವನ್ನೂ ಪ್ರಕಟಿಸಿದೆ. ಗಾಯಗೊಂಡ ಯೋಧರನ್ನು ಪೂರ್ವ ಉಕ್ರೇನ್ನಲ್ಲಿನ ರಶ್ಯ ನಿಯಂತ್ರಿತ ಪ್ರದೇಶದ ಆಸ್ಪತ್ರೆಗೆ ದಾಖಲಿಸಿರುವುದಾಗಿ ಹೇಳಿಕೆ ತಿಳಿಸಿದೆ.
ಅಝೋವ್ಸ್ತಲ್ ಸ್ಥಾವರದಲ್ಲಿ ಶರಣಾದ ತನ್ನ ಯೋಧರನ್ನು ಬಿಡುಗಡೆಗೊಳಿಸಿದರೆ ತನ್ನ ವಶದಲ್ಲಿರುವ ರಶ್ಯದ ಯೋಧರನ್ನು ಬಿಡುಗಡೆ ಮಾಡುವುದಾಗಿ ಉಕ್ರೇನ್ ಹೇಳಿದೆ. ಈ ಮಧ್ಯೆ, ಉಕ್ರೇನ್ನಲ್ಲಿ ಆರಂಭವಾಗಿರುವ ಬಿಕ್ಕಟ್ಟನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಶಾಂತಿ ಮಾತುಕತೆಯನ್ನು ಮುಂದುವರಿಸಲು ಉಕ್ರೇನ್ ಅಧಿಕಾರಿಗಳಿಗೆ ಮನಸ್ಸಿಲ್ಲ ಎಂದು ರಶ್ಯ ಆರೋಪಿಸಿದೆ.
ಮಾತುಕತೆಯಲ್ಲಿ ನಿಜವಾಗಿಯೂ ಪ್ರಗತಿಯಾಗುತ್ತಿಲ್ಲ ಮತ್ತು ಈ ಪ್ರಕ್ರಿಯೆಯನ್ನು ಮುಂದುವರಿಸುವಲ್ಲಿ ಉಕ್ರೇನ್ ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆಯಿರುವುದನ್ನು ನಾವು ಗಮನಿಸಿದ್ದೇವೆ ಎಂದು ರಶ್ಯ ಅಧ್ಯಕ್ಷರ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ಧಿಗಾರರಿಗೆ ಹೇಳಿದ್ದಾರೆ