ದೇಶದಲ್ಲಿ ಗೋಧಿ ಉತ್ಪಾದನೆ ಕುಸಿತ : ಕೃಷಿ ಸಚಿವಾಲಯದ ಅಂಕಿ ಅಂಶ

ಹೊಸದಿಲ್ಲಿ: ದೇಶದಲ್ಲಿ ಪ್ರಸಕ್ತ ವರ್ಷ ಗೋಧಿ ಉತ್ಪಾದನೆ 106.41 ದಶಲಕ್ಷ ಟನ್ಗೆ ಕುಸಿಯುವ ನಿರೀಕ್ಷೆ ಇದೆ. ಕಳೆದ ವರ್ಷ ದೇಶದಲ್ಲಿ 109.59 ದಶಲಕ್ಷ ಟನ್ ಗೋಧಿ ಉತ್ಪಾದಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ ಉತ್ಪಾದನೆ ಶೇಕಡ 3ರಷ್ಟು ಕಡಿಮೆ ಎಂದು ಕೃಷಿ ಸಚಿವಾಲಯದ ಅಂದಾಜಿನ ಅಂಕಿ ಅಂಶಗಳಿಂದ ತಿಳಿದುಬರುತ್ತದೆ.
ಬಿಸಿಲಿನ ಝಳದಿಂದಾಗಿ ಹಲವು ಗೋಧಿ ಬೆಳೆಯುವ ರಾಜ್ಯಗಳಲ್ಲಿ ಇಳುವರಿ ಶೇಕಡ 20ರಷ್ಟು ಕಡಿಮೆಯಾಗಿದೆ. ಸತತ ಐದು ವರ್ಷಗಳ ದಾಖಲೆ ಇಳುವರಿಯ ಬಳಿಕ ಈ ವರ್ಷ ಉತ್ಪಾದನೆ ಕುಸಿದಿದೆ.
ದೇಶದ ಆಹಾರ ಭದ್ರತೆ ಅಗತ್ಯತೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಸರ್ಕಾರದ ಅನುಮತಿ ಹೊರತಾಗಿ ಎಲ್ಲ ಆಹಾರ ಧಾನ್ಯಗಳ ರಫ್ತನ್ನು ಭಾರತ ಮೇ 13ರಂದು ನಿಷೇಧಿಸಿತ್ತು. ಉಕ್ರೇನ್ ಯುದ್ಧದ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಕೊರತೆ ಹಿನ್ನೆಲೆಯಲ್ಲಿ ಇಡೀ ವಿಶ್ವ ಭಾರತವನ್ನು ಆಹಾರ ಧಾನ್ಯಕ್ಕಾಗಿ ಎದುರು ನೋಡುತ್ತಿದೆ. ರಷ್ಯಾ ಹಾಗೂ ಉಕ್ರೇನ್ ಜಾಗತಿಕ ಗೋಧಿ ರಫ್ತಿನ ಮೂರನೇ ಒಂದರಷ್ಟು ಪಾಲು ಹೊಂದಿವೆ.
ಸರ್ಕಾರದ ಮೂರನೇ ತ್ರೈಮಾಸಿಕ ಅಂದಾಜಿನಲ್ಲಿ ತಾತ್ಕಾಲಿಕ ಅಂದಾಜಿನಂತೆ 105 ದಶಲಕ್ಷ ಟನ್ ಬದಲಾಗಿ 1.41 ದಶಲಕ್ಷ ಟನ್ ಅಧಿಕ ಉತ್ಪಾದನೆಯಾಗಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ಕಳೆದ ಫೆಬ್ರುವರಿಯಲ್ಲಿ ಅಂದಾಜು ಮಾಡಲಾದ 111.32 ದಶಲಕ್ಷ ಟನ್ಗಿಂತಲೂ ಶೇಕಡ 5ರಷ್ಟು ಕಡಿಮೆ ಎಂದು ಗುರುವಾರ ಬಿಡುಗಡೆ ಮಾಡಲಾದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ.
ಅಕ್ಕಿ ಉತ್ಪಾದನೆಯಲ್ಲಿ ಶೇಕಡ 4.2ರಷ್ಟು ಏರಿಕೆಯಾಗುವ ನಿರೀಕ್ಷೆ ಇದ್ದು, 129.66 ದಶಲಕ್ಷ ಟನ್ಗಳಾಗಲಿವೆ. ಹಿಂದಿನ ವರ್ಷ 124.37 ದಶಲಕ್ಷ ಟನ್ ಅಕ್ಕಿ ಉತ್ಪಾದಿಸಲಾಗಿತ್ತು.
ಗೋಧಿ ಉತ್ಪಾದನೆ ಕುಂಠಿತವಾಗಿದ್ದರೂ, ದೇಶದ ಒಟ್ಟು ಆಹಾರಧಾನ್ಯ ಉತ್ಪಾದನೆ 314.51 ದಶಲಕ್ಷ ಟನ್ ಆಗುವ ಸಾಧ್ಯತೆ ಇದ್ದು, ಇದು ಕಳೆದ ವರ್ಷದ ಉತ್ಪಾದನೆಯಾದ 310.74 ದಶಲಕ್ಷ ಟನ್ಗಳಿಗಿಂತ ಅಧಿಕ. ಬೇಳೆಕಾಳುಗಳ ಉತ್ಪಾದನೆ ಕಳೆದ ವರ್ಷಕ್ಕಿಂತ ಶೇಕಡ 8ರಷ್ಟು ಹೆಚ್ಚಿ 25.46 ದಶಲಕ್ಷ ಟನ್ ಆಗುವ ನಿರೀಕ್ಷೆ ಇದೆ.