ಎಸ್‌ಟಿ ಮೀಸಲು ಶೇ.7.5ಕ್ಕೆ ಹೆಚ್ಚಿಸುವಂತೆ ಆಗ್ರಹಿಸಿ ಧರಣಿ
ಕೊರಗ, ಮರಾಟಿ ನಾಯ್ಕ, ಮಲೆ ಕುಡಿಯ ಸಂಘಟನೆಗಳ ನೇತೃತ್ವ
ಉಡುಪಿ : ಪರಿಶಿಷ್ಟ ಪಂಗಡಕ್ಕೆ ಮೀಸಲು ಪ್ರಮಾಣವನ್ನು ಶೇ.೩ ರಿಂದ ಶೇ.೭.೫ಕ್ಕೆ ಹೆಚ್ಚಿಸಲು ಆಗ್ರಹಿಸಿ ಕರ್ನಾಟಕ ರಾಜ್ಯ ಸ್ವಾಭಿಮಾನಿ ಪರಿಶಿಷ್ಟ ಪಂಗಡಗಳ ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ಉಡುಪಿ ಜಿಲ್ಲೆ ಇದರ ನೇತೃತ್ವದಲ್ಲಿ ಕೊರಗ ಸಂಘಟನೆ, ಮರಾಟಿ ನಾಯ್ಕ ಸಂಘಟನೆ ಹಾಗೂ ಮಲೆ ಕುಡಿಯ ಸಂಘಟನೆಗಳು ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಶುಕ್ರವಾರ ಧರಣಿ ನಡೆಸಿತು.
ಮಣಿಪಾಲದ ಟೈಗರ್ ಸರ್ಕಲ್ ಬಳಿಯಿಂದ ಹೊರಟ ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿ ಎದುರು ಸಮಾಪ್ತಿ ಗೊಂಡಿತು. ಬಳಿಕ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಶುಕ್ರವಾರ ಮನವಿ ಸಲ್ಲಿಸಲಾ ಯಿತು. ಮನವಿಯನ್ನು ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ರಾಜು ಮನವಿ ಸ್ವೀಕರಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಉಡುಪಿ ಜಿಲ್ಲಾ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಅನಂತ ನಾಯ್ಕ, ೧೯೬೧ರ ಜನಗಣತಿಗೆ ಹೋಲಿಸಿದರೆ ಪರಿಶಿಷ್ಟ ಪಂಗಡದ ಜನಸಂಖ್ಯೆ ಶೇ.೨೨.೧೧ರಷ್ಟು ಹೆಚ್ಚಿದ್ದರೂ ಮೀಸಲು ಪ್ರಮಾಣ ಮಾತ್ರ ಕಳೆದ ಐದಾರು ದಶಕದಿಂದ ಕೇವಲ ಶೇ.೩ರಷ್ಟಿದೆ. ಇದರಿಂದ ಪರಿಶಿಷ್ಟ ಪಂಗಡದದ ವಿದ್ಯಾರ್ಥಿಗಳಿಗೆ, ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿದೆ ಎಂದು ದೂರಿದರು.
ಉಡುಪಿ ಜಿಲ್ಲಾ ಮಲೆಕುಡಿಯರ ಸಂಘಟನೆ ಅಧ್ಯಕ್ಷ ಶ್ರೀಧರ ಗೌಡ ಮಾತನಾಡಿ, ಕೇಂದ್ರ ಸರಕಾರ ಪರಿಶಿಷ್ಟ ಪಂಗಡಕ್ಕೆ ಶೇ.೭.೫ಮೀಸಲು ನಿಗದಿ ಪಡಿಸಿದ್ದರೂ ರಾಜ್ಯ ಸರಕಾರದ ಮೀಸಲು ಪ್ರಮಾಣ ಶೇ.೩ರಲ್ಲಿದೆ. ೧೦ ದಿನದೊಳಗೆ ಸರಕಾರ ಸ್ಪಂದಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
ಕೊರಗ ಸಂಘಟನೆ ಮುಖಂಡರಾದ ಗಣೇಶ್ ಕೊರಗ ಕುಂದಾಪುರ, ಗಣೇಶ್ ಕೊರಗ ಬಾರ್ಕೂರು, ಮರಾಟಿ ನಾಯ್ಕ ಸಂಘಟನೆ ಮುಖಂಡರಾದ ಉಮೇಶ್ ನಾಯ್ಕ್ ಚೇರ್ಕಾಡಿ, ಜಯರಾಮ ನಾಯ್ಕ ಬೈಂದೂರು, ಕೃಷ್ಣ ನಾಯ್ಕ ಕರ್ಜೆ, ಕೃಷ್ಣ ನಾಯ್ಕ ಆತ್ರಾಡಿ, ಭೋಜ ನಾಯ್ಕ್ ಬೈಂದೂರು, ದೇವೇಂದ್ರ ನಾಯ್ಕ್ ಮಣಿಪಾಲ, ವಾರಿಜಾ ನಾಯ್ಕ್ ಆತ್ರಾಡಿ, ಇಂದಿರಾ ನಾಯ್ಕ್ ಹೆಬ್ರಿ, ಜಾನಕಿ ನಾಯ್ಕ್, ಲಕ್ಷ್ಮೀ ನಾಯ್ಕ್, ಗೌರಿ ಕೆಂಜೂರು, ನಾಗಮ್ಮ ಬೈಂದೂರು, ಸುರೇಶ್ ನಾಯ್ಕ್ ಹಿರೇಬೆಟ್ಟು ಉಪಸ್ಥಿತರಿದ್ದರು.