ಬೆಂಗಳೂರು: ಹದಿನೈದು ಲಕ್ಷ ಮೌಲ್ಯದ ಮಾದಕ ವಸ್ತು ವಶ, ತಾಂಜೇನಿಯಾ ಮೂಲದ ಓರ್ವ ಆರೋಪಿಯ ಸೆರೆ

ಬೆಂಗಳೂರು, ಮೇ 20: ವಿದ್ಯಾರ್ಥಿ ವೀಸಾದ ಹಿನ್ನೆಲೆಯಲ್ಲಿ ಭಾರತಕ್ಕೆ ಬಂದು ನಗರದಲ್ಲಿ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದ ತಾಂಜೇನಿಯಾ ದೇಶದ ಡ್ರಗ್ ಪೆಡ್ಲರ್‍ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಸುಮಾರು 15 ಲಕ್ಷ ರೂ.ಮೌಲ್ಯದ ನಿಷೇಧಿತ ಮಾದಕ ವಸ್ತು 150 ಗ್ರಾಂ ಎಂಡಿಎಂಎ ಕ್ರಿಸ್ಟೆಲ್, ಕೃತ್ಯಕ್ಕೆ ಬಳಸಲಾಗಿದ್ದ ಮೊಬೈಲ್, ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
ಆರೋಪಿಯು ಮೂಲತಃ ತಾಂಜೇನಿಯಾ ದೇಶದವನಾಗಿದ್ದು, ನಾಲ್ಕು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾ ಪಡೆದು ಭಾರತಕ್ಕೆ ಬಂದು ನಂತರ ಬೆಂಗಳೂರಿನ ಖಾಸಗಿ ಕಾಲೇಜಿಗೆ ಬಿಕಾಂ ವ್ಯಾಸಂಗಕ್ಕೆ ಸೇರಿಕೊಂಡಿದ್ದನು. ಬಳಿಕ ತನ್ನ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿ ಕಡಿಮೆ ಸಮಯದಲ್ಲಿ ಹೆಚ್ಚಿನ ಹಣಗಳಿಸುವ ದುರುದ್ದೇಶದಿಂದ ಮಾದಕ ವಸ್ತು ಮಾರಾಟದಲ್ಲಿ ತೊಡಗಿದ್ದುದು ಪೊಲೀಸರ ವಿಚಾರಣೆಯಿಂದ ಗೊತ್ತಾಗಿದೆ. ಈತನ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಕಾರ್ಯಾಚರಣೆ, ಡ್ರಗ್ ಪೆಡ್ಲಿಂಗ್ ನಲ್ಲಿ ತೊಡಗಿದ್ದ ತಾಂಜೇನಿಯಾ ದೇಶದ ಓರ್ವ ಪ್ರಜೆಯ ಬಂಧಿಸಿ ಸುಮಾರು 15 ಲಕ್ಷ ರೂ ಮೌಲ್ಯದ 150 ಗ್ರಾಂ ತೂಕದ ಎಂ.ಡಿ.ಎಂ.ಎ ಕ್ರಿಸ್ಟೆಲ್ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದ್ದು, ಎಲೆಕ್ಟ್ರಾನಿಕ್ ತೂಕದ ಯಂತ್ರ ಹಾಗೂ ಮೊಬೈಲ್ ಪೋನ್ ಅಮಾನತ್ತು ಪಡಿಸಿಕೊಳ್ಳಲಾಗಿದೆ. pic.twitter.com/I03CHFe03b
— Raman Gupta IPS (@JointCP_crime) May 20, 2022







