ಮಕ್ಕಳ ಆಸಕ್ತಿ ಪರಿಗಣಿಸಿ ಹೊಸ ಶಿಕ್ಷಣ ನೀತಿ ಜಾರಿ : ಸಚಿವ ಬಿ.ಸಿ.ನಾಗೇಶ್
ಪುತ್ತೂರಿನಲ್ಲಿ ವಿವಿಧ ಕಾಮಗಾರಿಗಳ ಉದ್ಘಾಟನೆ

ಪುತ್ತೂರು: ಭಾರತ ಜಗದ್ಗುರುವಾಗಿ ಬೆಳೆಯಬೇಕಾದರೆ ಮಕ್ಕಳು ಆ ಮಟ್ಟದಲ್ಲಿ ಬೆಳೆಯಬೇಕಾಗಿದೆ. ಈ ಕಾರಣದಿಂದ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಸಚಿವ ಬಿ. ಸಿ. ನಾಗೇಶ್ ಹೇಳಿದರು.
ಶುಕ್ರವಾರ ಪುತ್ತೂರಿನ ಹಾರಾಡಿ ದ.ಕ. ಜಿ.ಪಂ. ಮಾದರಿ ಉನ್ನತ ಹಿ.ಪ್ರಾ. ಶಾಲೆಯಲ್ಲಿ ನೂತನ ಕಟ್ಟಡ ಉದ್ಘಾಟನಾ ಸಮಾರಂಭ ಮತ್ತು ತಾಲೂಕು ಮಟ್ಟದ ಸರಕಾರದ ವಿವಿಧ ಶೈಕ್ಷಣಿಕ ಸೌಲಭ್ಯಗಳ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಕ್ಕಳೇ ನಮಗೆ ಸಂಪನ್ಮೂಲ. ಈ ಕಾರಣದಿಂದ ಸರಕಾರ ಪ್ರತಿ ವರ್ಷ ಶಿಕ್ಷಣ ಕ್ಷೇತ್ರಕ್ಕೆ ಅತಿ ಹೆಚ್ಚು ಸುಮಾರು 24 ಸಾವಿರ ಕೋಟಿ ರೂ. ಖರ್ಚು ಮಾಡುತ್ತದೆ ಎಂದು ಹೇಳಿದ ಅವರು ಸರಕಾರ ಸರಕಾರಿ ಶಾಲೆಗಳನ್ನು ಮಾರ್ಕೆಟಿಂಗ್ ಮಾಡುವಲ್ಲಿ ಸೋತಿದ್ದೇವೆ. ಆದರೆ ದ.ಕ. ಜಿಲ್ಲೆಯಲ್ಲಿ ಸರಕಾರಿ ಮತ್ತು ಖಾಸಗಿ ಶಾಲೆಗಳು ಸಮಾನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಅಭಿಪ್ರಾಯಿಸಿದರು.
ಕಟ್ಟ ಕಡೆಯ ಮಗುವೂ ಶಿಕ್ಷಣ ಪಡೆಯಬೇಕು ಎನ್ನುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ಸರ್ವ ಶಿಕ್ಷಣ ಅಭಿಯಾನ ಆರಂಭಿಸಲಾಯಿತು. ನರೇಂದ್ರ ಮೋದಿ ಸರಕಾರದಲ್ಲಿ ಬೇಟಿ ಬಜಾವೋ ಬೇಟಿ ಪಡಾವೋದಂತಹ ಕಾರ್ಯಕ್ರಮಗಳ ಮೂಲಕ ಹೆಣ್ಣು ಮಕ್ಕಳ ಶಿಕ್ಷಣದ ಉದ್ದೇಶವನ್ನು ಇಟ್ಟುಕೊಂಡು ಅಮೂಲಾಗ್ರ ಬದಲಾವಣೆಯ ಕಡೆಗೆ ಸಾಗುತ್ತಿದ್ದೇವೆ. ಅ ಮೂಲಕ ಮಗುವಿನ ಅರಿವಿಗಾಗಿ ಶಿಕ್ಷಣ ಎಂಬ ಪರಿಕಲ್ಪನೆ ಬೆಳೆಸಲಾಗುತ್ತಿದೆ ಎಂದರು.
ಮಾದರಿ ಶಾಲೆ, ಶಿಕ್ಷಕರ ನೇಮಕ
ಇಂದು ಎಲ್ಲರೂ ಶಾಲೆಯಲ್ಲಿ ಆಂಗ್ಲ ಮಾದ್ಯಮ ಶಿಕ್ಷಣ ಬೇಕು ಎಂದು ಕೇಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿ ಗಳ ಸೂಚನೆಯಂತೆ ಹೊಸ ಮಾದರಿ ಶಾಲೆಗಳನ್ನು ಮಾಡುತ್ತಿದ್ದೇವೆ. ಪ್ರತಿ ತರಗತಿಗೆ ಶಿಕ್ಷಕರು, ತರಗತಿ ಕೊಠಡಿ ನೀಡುತ್ತೇವೆ ಎಂದು ಹೇಳಿದ ಸಚಿವರು, ರಾಜ್ಯದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿಗೆ ಸರಕಾರ ಮುಂದಾಗಿದ್ದು, ಕೆಲವೇ ದಿನಗಳಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ತಿಳಿಸಿದರು.
ಶ್ರದ್ಧಾಬಿಂದು
ಅಧ್ಯಕ್ಷತೆ ವಹಿಸಿದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಶಾಲೆ, ಕಾಲೇಜುಗಳು ದೇಶ ಶ್ರದ್ಧಾ ಬಿಂದು. ಈ ನಿಟ್ಟಿನಲ್ಲಿ ನಮ್ಮ ಸರಕಾರ ಹಳ್ಳಿಗಳಲ್ಲೂ ಕೇಂದ್ರೀಯ ಶಿಕ್ಷಣ ಮಾದರಿಯ ಪಬ್ಲಿಕ್ ಸ್ಕೂಲ್‍ಗಳನ್ನು ಆರಂಭಿಸಿದೆ ಎಂದರು. ತಾಲೂಕಿನಲ್ಲಿ ಶಿಕ್ಷಣ ವ್ಯವಸ್ಥೆಯ ಅಭಿವೃದ್ಧಿಗಾಗಿ ಬೇರೆ ಬೇರೆ ಮೂಲಗಳಿಂದ 10.34 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಪುತ್ತೂರು ಸಹಾಯಕ ಕಮಿಷನರ್ ಗಿರೀಶ್ ನಂದನ್, ನಗರಸಭಾ ಅಧ್ಯಕ್ಷ ಜೀವಂಧರ್ ಜೈನ್, ಉಪಾಧ್ಯಕ್ಷೆ ವಿದ್ಯಾ ಗೌರಿ, ಸದಸ್ಯೆ ಪ್ರೇಮಲತಾ ಜಿ. ನಂದಿಲ, ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಕೃಷ್ಣ, ಪುಡಾ ಅಧ್ಯಕ್ಷ ಭಾಮಿ ಅಶೋಕ್ ಶೆಣೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೈಕ್ಷಣಿಕ ಸೌಲಭ್ಯಗಳ ವಿತರಣೆ
ಇದೇ ಸಂದರ್ಭದಲ್ಲಿ ತಾಲೂಕು ಮಟ್ಟದ ಸರಕಾರದ ವಿವಿಧ ಶೈಕ್ಷಣಿಕ ಸೌಲಭ್ಯಗಳ ವಿತರಣೆಗೆ ಚಾಲನೆ ನೀಡಲಾಯಿತು. ರೂ.5 ಕೋಟಿ ವೆಚ್ಚದಲ್ಲಿ ತಾಲೂಕಿನ 95 ಸರಕಾರಿ ಪ್ರಾಥಮಿಕ ಶಾಲೆಗಳು, 90 ಪ್ರೌಢ ಶಾಲೆಗಳು, 5 ಪ. ಪೂ. ಕಾಲೇಜು, 2 ಪಬ್ಲಿಕ್ ಸ್ಕೂಲ್‍ಗಳಿಗೆ ಬೆಂಚ್, ಡೆಸ್ಕ್, ಸ್ಮಾರ್ಟ್ ಕ್ಲಾಸ್ ಪರಿಕರಗಳು ಮತ್ತು ಕುಡಿಯುವ ನೀರಿನ ಘಟಕ ಹಾಗೂ 215 ಅಂಗನವಾಡಿಗಳಿಗೆ ಶುದ್ಧ ಕುಡಿಯುವ ನೀರಿನ ಘಟಕ ವಿತರಣೆಗೆ ಚಾಲನೆ ನೀಡಿದರು.
ಅಭಿನಂದನೆ
ಈ ಬಾರಿಯ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಪೂರ್ಣ 625 ಆಂಕಗಳನ್ನು ಪಡೆದಪುತ್ತೂರು ವಿಧಾನಸಭಾ ಸಭಾ ಕ್ಷೇತ್ರದ 4 ಮಂದಿ ವಿದ್ಯಾರ್ಥಿಗಳು ಹಾಗೂ 624 ಅಂಕಗಳನ್ನು ಪಡೆದ 11 ವಿದ್ಯಾರ್ಥಿಗಳನ್ನು ಶಿಕ್ಷಣ ಸಚಿವರು ಸಮ್ಮಾನಿಸಿದರು. ಹಾರಾಡಿ ಶಾಲಾ ಶಿಕ್ಷಕವೃಂದದವರನ್ನು ಗೌರವಿಸಿದರು. ಶಿಕ್ಷಣ ಸಚಿವರು ಹಾಗೂ ಪುತ್ತೂರು ಶಾಸಕರನ್ನು ಸನ್ಮಾನಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಸಿ. ಸ್ವಾಗತಿಸಿ, ಮುಖ್ಯ ಶಿಕ್ಷಕ ಕೆ. ಕುಕ್ಕ ಪ್ರಸ್ತಾವಿಸಿದರು. ಕ್ಷೇತ್ರ ಸಮಾನ್ವಯಧಿಕಾರಿ ಶೋಭಾ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಪೆÇೀರ್ದಲ್ ಕಾರ್ಯಕ್ರಮ ನಿರ್ವಹಿಸಿದರು.