ಚೆನ್ನೈಗೆ ಸೋಲುಣಿಸಿದ ರಾಜಸ್ಥಾನ ಕ್ವಾಲಿಫೈಯರ್ಗೆ ಲಗ್ಗೆ
ಮೊಯಿನ್ ಅಲಿ ಭರ್ಜರಿ ಬ್ಯಾಟಿಂಗ್ ವ್ಯರ್ಥ: ಜೈಸ್ವಾಲ್ ಅರ್ಧಶತಕ

ಯಶಸ್ವಿ ಜೈಸ್ವಾಲ್ Photo:twitter
ಮುಂಬೈ, ಮೇ 20: ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅರ್ಧಶತಕ(59 ರನ್, 44 ಎಸೆತ, 8 ಬೌಂಡರಿ, 1 ಸಿಕ್ಸರ್)ಹಾಗೂ ಆರ್.ಅಶ್ವಿನ್(ಔಟಾಗದೆ 40 ರನ್, 23 ಎಸೆತ, 2 ಬೌಂಡರಿ, 3 ಸಿಕ್ಸರ್)ಸಾಹಸದ ನೆರವಿನಿಂದ ಬ್ರೆಬೋರ್ನ್ ಸ್ಟೇಡಿಯಂನಲ್ಲಿ ಶುಕ್ರವಾರ ನಡೆದ ಐಪಿಎಲ್ನ 68ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 5 ವಿಕೆಟ್ಗಳ ಅಂತರದಿಂದ ಜಯ ಸಾಧಿಸಿದೆ.
ಗೆಲ್ಲಲು 151 ರನ್ ಗುರಿ ಪಡೆದ ರಾಜಸ್ಥಾನ ಇನ್ನೂ 2 ಎಸೆತ ಬಾಕಿ ಇರುವಾಗಲೇ ಗೆಲುವು ದಾಖಲಿಸಿತು.
ತಾನಾಡಿದ 14ನೇ ಪಂದ್ಯದಲ್ಲಿ 9ನೇ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಭಡ್ತಿ ಪಡೆದಿರುವ ರಾಜಸ್ಥಾನ ಕ್ವಾಲಿಫೈಯರ್ಗೆ ತೇರ್ಗಡೆಯಾಗಿದೆ. ಚೆನ್ನೈ 14ರಲ್ಲಿ 10ನೇ ಸೋಲು ಅನುಭವಿಸಿ ಟೂರ್ನಿಯಿಂದ ನಿರ್ಗಮಿಸಿದೆ.
ಇದಕ್ಕೂ ಮೊದಲು ಟಾಸ್ ಮೊದಲು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ತಂಡವು ಅಗ್ರ ಕ್ರಮಾಂಕದ ಬ್ಯಾಟರ್ ಮೊಯಿನ್ ಅಲಿ ಭರ್ಜರಿ ಬ್ಯಾಟಿಂಗ್(93 ರನ್, 57 ಎಸೆತ, 13 ಬೌಂಡರಿ, 3 ಸಿಕ್ಸರ್)ಹೊರತಾಗಿಯೂ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿತು.
ಮೊದಲ ಓವರ್ನ ಕೊನೆಯ ಎಸೆತದಲ್ಲಿ ಋತುರಾಜ್ ಗಾಯಕ್ವಾಡ್(2 ರನ್)ವಿಕೆಟನ್ನು ಕಳೆದುಕೊಂಡ ಚೆನ್ನೈ ಕಳಪೆ ಆರಂಭ ಪಡೆಯಿತು. ಆಗ 2ನೇ ವಿಕೆಟ್ಗೆ 83 ರನ್ ಜೊತೆಯಾಟ ನಡೆಸಿದ ಮೊಯಿನ್ ಅಲಿ ಹಾಗೂ ಡೆವೊನ್ ಕಾನ್ವೆ(16 ರನ್)ತಂಡವನ್ನು ಆಧರಿಸಿದರು. ಆದರೆ ಈ ಇಬ್ಬರು ಬೇರ್ಪಟ್ಟ ಬಳಿಕ ಚೆನ್ನೈ ದಿಢೀರ್ ಕುಸಿತ ಕಂಡಿತು. ಕಾನ್ವೆ, ನಾರಾಯಣ್ ಜಗದೀಶನ್(1 ರನ್)ಅಂಬಟಿ ರಾಯುಡು(3 ರನ್)ಬೆನ್ನುಬೆನ್ನಿಗೆ ವಿಕೆಟ್ ಒಪ್ಪಿಸಿದರು. ಆಗ ಅಲಿಯೊಂದಿಗೆ ಜೊತೆಯಾದ ನಾಯಕ ಎಂ.ಎಸ್. ಧೋನಿ (26 ರನ್, 28 ಎಸೆತ, 1 ಬೌಂಡರಿ, 1 ಸಿಕ್ಸರ್)5ನೇ ವಿಕೆಟ್ಗೆ 51 ರನ್ ಸೇರಿಸಿದರು. ಧೋನಿ 19ನೇ ಓವರ್ನಲ್ಲಿ ವಿಕೆಟ್ ಒಪ್ಪಿಸಿದರು.
93 ರನ್ ಗಳಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಅಲಿ ಕೊನೆಯ ಓವರ್ನ ಮೊದಲ ಎಸೆತದಲ್ಲಿ ಒಬೆಡ್ ಮೆಕಾಯ್ಗೆ ವಿಕೆಟ್ ಒಪ್ಪಿಸಿದರು. ರಾಜಸ್ಥಾನದ ಪರ ಮೆಕಾಯ್(2-20) ಹಾಗೂ ಯಜುವೇಂದ್ರ ಚಹಾಲ್(2-26)ತಲಾ ಎರಡು ವಿಕೆಟ್ ಪಡೆದರು. ಆರ್.ಅಶ್ವಿನ್(1-28) ಹಾಗೂ ಟ್ರೆಂಟ್ ಬೌಲ್ಟ್(1-44)ತಲಾ ಒಂದು ವಿಕೆಟ್ ಹಂಚಿಕೊಂಡರು.







