ರಾಜ್ಯದ ಮೂರು ಜಿಲ್ಲೆಗಳ ಕಬ್ಬಿಣದ ಅದಿರು ರಫ್ತಿಗೆ ಸುಪ್ರೀಂ ಅಸ್ತು

ಹೊಸದಿಲ್ಲಿ: ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳ ಗಣಿಗಳಿಂದ ಈಗಾಗಲೇ ಅಗೆಯಲಾಗಿರುವ ಕಬ್ಬಿಣದ ಅದಿರನ್ನು ರಫ್ತು ಮಾಡಲು ಗಣಿ ಕಂಪೆನಿಗಳಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ಮುಖ್ಯ ನ್ಯಾಯಾಧೀಶ ಎನ್.ವಿ.ರಮಣ ಹಾಗೂ ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು ಕೇಂದ್ರ ಸರಕಾರದ ನಿಲುವನ್ನು ಪರಿಗಣಿಸಿ ಕಬ್ಬಿಣದ ಅದಿರಿನ ರಫ್ತಿನ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ತೆರವುಗೊಳಿಸಿತು. ಅದೇ ವೇಳೆ, ಅಧಿಕಾರಿಗಳು ವಿಧಿಸಿರುವ ಷರತ್ತುಗಳನ್ನು ಪಾಲಿಸುವಂತೆ ನ್ಯಾಯಪೀಠವು ಗಣಿ ಕಂಪೆನಿಗಳಿಗೆ ಸೂಚಿಸಿತು.
“ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಅಗೆಯಲಾಗಿ ರುವ ಕಬ್ಬಿಣದ ಅದಿರಿನ ಸಂಗ್ರಹವನ್ನು ಮಾರಾಟ ಮಾಡಲು ನಾವು ಅರ್ಜಿದಾರರಿಗೆ ಅನುಮತಿ ನೀಡುತ್ತೇವೆ ಹಾಗೂ ಅದಿರನ್ನು ಇ-ಹರಾಜು ಮಾಡದೆ ಅದರ ಮಾರಾಟಕ್ಕೆ ನೇರ ಗುತ್ತಿಗೆ ಕರಾರುಗಳನ್ನು ಏರ್ಪಡಿಸಲು ಅನುಮತಿ ನೀಡುತ್ತೇವೆ. ಕರ್ನಾಟಕದಲ್ಲಿ ಅಗೆದಿರುವ ಅದಿರನ್ನು ವಿದೇಶಗಳಿಗೆ ರಫ್ತು ಮಾಡಲು ಅರ್ಜಿದಾರರಿಗೆ ಅನುಮತಿ ನೀಡಲಾಗಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಭಾರತ ಸರಕಾರದ ನಿಯಮಾವಳಿಗಳನ್ನು ಅನುಸರಿಸಬೇಕು' ಎಂದು ನ್ಯಾಯಪೀಠ ಹೇಳಿತು.
ಸುಪ್ರೀಂ ಕೋರ್ಟ್ 2012ರಲ್ಲಿ ಕರ್ನಾಟಕದ ಕಬ್ಬಿಣದ ಅದಿರಿನ ರಫ್ತನ್ನು ನಿಷೇಧಿಸಿತ್ತು. ಪರಿಸರ ನಾಶವನ್ನು ತಡೆಯಲು ಮತ್ತು ರಾಜ್ಯದ ಖನಿಜ ಸಂಪನ್ಮೂಲಗಳನ್ನು ಮುಂದಿನ ತಲೆಮಾರುಗಳಿಗೂ ಉಳಿಸುವುದಕ್ಕಾಗಿ ಅದು ಈ ಆದೇಶವನ್ನು ನೀಡಿತ್ತು.