ರಾಜ್ಯದಲ್ಲಿ 7 ಸಾವಿರ ಶಾಲಾ ಕೊಠಡಿಗಳ ನಿರ್ಮಾಣವಾಗಿದೆ: ಶಿಕ್ಷಣ ಸಚಿವ ಬಿ ಸಿ ನಾಗೇಶ್
ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್ ನೂತನ ಕಟ್ಟಡ ಲೋಕಾರ್ಪಣೆ

ಪುತ್ತೂರು: ರಾಜ್ಯ ಸರಕಾರ ಶಿಕ್ಷಣದ ಕಡೆ ಹೆಚ್ಚು ಒಲವು ತೋರುತ್ತಿದ್ದು ಕಳೆದ ನಾಲ್ಕು ವರ್ಷದಲ್ಲಿ ರಾಜ್ಯದಲ್ಲಿ ಒಟ್ಟು 7000 ತರಗತಿ ಕೊಠಡಿಗಳ ನಿರ್ಮಾಣ ಕಾರ್ಯ ನಡೆದಿದೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಹೇಳಿದರು.
ಅವರು ಕುಂಬ್ರ ಕರ್ನಾಟಕ ಪಬ್ಲಿಕ್ ಸ್ಕೂಲ್‍ನಲ್ಲಿ ನೂತನವಾಗಿ ನಿರ್ಮಾಣಗೊಂಡ ಕೊಠಡಿಗಳ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸರಕಾರಿ ಶಾಲೆಗಳು ಮೂಲಭೂತ ಸೌಕರ್ಯದಿಂದ ವಂಚಿತ ಆಗಬಾರದು ಎಂಬ ಉದ್ದೇಶದಿಂದ ಶೌಚಾಲಯ, ಪ್ರಯೋಗಾಲಯ, ಸೇರಿದಂತೆ ಬೇಡಿಕೆ ಇರುವ ಎಲ್ಲಾ ಸೌಲಭ್ಯಗಳ ಕಡೆ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗಿದೆ. ಸರಕಾರಿ ಶಾಲೆಗಳಲ್ಲಿರುವ ಎಸ್‍ಡಿಎಂಸಿ ಸಮಿತಿಯು ಹೆಚ್ಚು ಸಕ್ರಿಯವಾಗಿದ್ದು ಇದು ಉತ್ತಮ ಬೆಳವಣಿಗೆಯಾಗಿದೆ ಎಂದ ಅವರು ಶಾಲೆಯ ಅಭಿವೃದ್ಧಿ ವಿಚಾರದಲ್ಲಿ ಪೋಷಕರ ಸಹಬಾಗಿತ್ವ ಅತೀ ಅಗತ್ಯವಾಗಿದೆ ಎಂದು ಹೇಳಿದರು.
15,000 ಶಿಕ್ಷಕರ ನೇಮಕ
ರಾಜ್ಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 15 ಸಾವಿರ ಶಿಕ್ಷಕರ ನೇಮಕಾತಿ ನಡೆಯಲಿದೆ. ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಗುತ್ತದೆ. ಶಿಕ್ಷಕರ ಕೊರತೆಯನ್ನು ನೀಗಿಸುವಲ್ಲಿ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಮಾಡಲಿದ್ದು ಮಕ್ಕಳ ವಿದ್ಯಾಬ್ಯಾಸಕ್ಕೆ ಇದರಿಂದ ತುಂಬಾ ಪ್ರಯೋಜನವಾಗಲಿದೆ ಎಂದು ಸಚಿವರು ಹೇಳಿದರು.
ಚಿತ್ರ 21ಪಿಟಿಆರ್ ಕುಂಬ್ರ







