ಉಡುಪಿ: ವಿವಿಧ ಮಾವಿನ ತಳಿಗಳ ಪ್ರದರ್ಶನ, ಮಾರಾಟ ಮೇಳ

ಉಡುಪಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಉಡುಪಿ ಹಾಗೂ ಜಿಲ್ಲಾ ತೆಂಗು ಮತ್ತು ಮಾವು ರೈತ ಉತ್ಪಾದಕರ ಸಂಸ್ಥೆ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ರೈತರಿಂದ ನೈಸರ್ಗಿಕವಾಗಿ ಮಾಗಿಸಿರುವ ವಿವಿಧ ಮಾವಿನ ತಳಿಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ಇಂದು ಸಂಜೆ ನಗರದ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ಪುಷ್ಪ ಹರಾಜು ಕೇಂದ್ರದ ಆವರಣದಲ್ಲಿ ಚಾಲನೆ ನೀಡಲಾಯಿತು.
ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಮಾವು ಮೇಳವನ್ನು ಉದ್ಘಾಟಿಸಿದ ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ರೈತರಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲು ಮಾವು ಮೇಳ ಉತ್ತಮ ಕಾರ್ಯಕ್ರಮವಾಗಿದ್ದು , ರೈತರು ತಾವು ಬೆಳೆದ ಮಾವುವನ್ನು ನೇರವಾಗಿ ಇಲ್ಲಿ ಮಾರಾಟ ಮಾಡುತ್ತಿರುವುದರಿಂದ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಮಾವು ಖರೀದಿಸಿ ರೈತರಿಗೆ ಪ್ರೋತ್ಸಾಹಿಸಬೇಕು ಎಂದರು.
ರೈತರು ತಮ್ಮ ಉತ್ಪನ್ನಗಳನ್ನು ದಲ್ಲಾಳಿಗಳ ಮೂಲಕ ಮಾರಾಟ ಮಾಡುವು ದರಿಂದ ಇದರ ಸಂಪೂರ್ಣ ಲಾಭವನ್ನು ದಲ್ಲಾಳಿಗಳೇ ಪಡೆದುಕೊಳ್ಳುತ್ತಾರೆ. ಇದರಿಂದ ಬೆವರು ಸುರಿಸಿದ ರೈತರು ನಿರಾಸೆಯ ಜೊತೆಗೆ ಆರ್ಥಿಕ ನಷ್ಟವನ್ನು ಅನುಭವಿಸುವಂತಾಗುತ್ತದೆ ಎಂದು ಅವರು ವಿವರಿಸಿದರು.
ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರೈತ ಉತ್ಪಾದಕರ ಸಂಘಟನೆ (ಎಫ್‌ಪಿಓ) ಮೂಲಕ, ರೈತರಿಗೆ ಆಗುವ ನಷ್ಟ ತಪ್ಪಿಸಿ ಸ್ವತಹ ಅವರೇ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಿ ಲಾಭ ಗಳಿಸುವ ಅವಕಾಶ ಒದಗಿಸಿದೆ ಎಂದರು. ಉಡುಪಿಯಲ್ಲೂ ಭತ್ತಕ್ಕೆ ಎಫ್‌ಪಿಓ ಪ್ರಾರಂಭಿಸಲಾಗುತ್ತಿದೆ ಎಂದು ರಘುಪತಿ ಭಟ್ ತಿಳಿಸಿದರು.
ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಕುಂದಾಪುರ ಸಹಾಯಕ ಕಮಿಷನರ್ ರಾಜು ಕೆ., ತೋಟಗಾರಿಕಾ ಇಲಾಖೆ ಉಪ ನಿರ್ದೇಶಕಿ ಭುವನೇಶ್ವರಿ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಮತ್ತಿತರರು ಉಪಸ್ಥಿತರಿದ್ದರು.







