ಶ್ರೀಲಂಕಾ: ದೇಶಾದ್ಯಂತ ವಿಧಿಸಿದ್ದ ತುರ್ತು ಪರಿಸ್ಥಿತಿ ರದ್ದು
photo:twitter/@interaksyon
ಕೊಲಂಬೊ, ಮೇ 21: ದೇಶಕ್ಕೆ ಎದುರಾದ ಅಸಾಮಾನ್ಯ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಮತ್ತು ಸರಕಾರ ವಿರೋಧಿ ಪ್ರತಿಭಟನೆಯ ಹಿನ್ನೆಲೆಯಲ್ಲಿ 2 ವಾರದ ಹಿಂದೆ ದೇಶದಾದ್ಯಂತ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ರದ್ದುಪಡಿಸಲಾಗಿದೆ ಎಂದು ಸರಕಾರದ ಮೂಲಗಳು ಶನಿವಾರ ಹೇಳಿವೆ.
ಮೇ 6ರ ಮಧ್ಯರಾತ್ರಿಯಿಂದ ಜಾರಿಯಲ್ಲಿದ್ದ ತುರ್ತುಪರಿಸ್ಥಿತಿ ಶುಕ್ರವಾರ (ಮೇ 20)ರ ಮಧ್ಯರಾತ್ರಿಯಿಂದ ರದ್ದಾಗಿದೆ. ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಸುಧಾರಣೆಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಶ್ರೀಲಂಕಾ ಅಧ್ಯಕ್ಷರ ಕಚೇರಿ ಹೇಳಿಕೆ ನೀಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶ್ರೀಲಂಕಾ ದೇಶದಲ್ಲಿ ಕಂಡು ಕೇಳರಿಯದ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಲು ಸರಕಾರದ ಅದಕ್ಷ ಕಾರ್ಯನಿರ್ವಹಣೆ ಕಾರಣ ಎಂದು ಆಕ್ರೋಶಗೊಂಡಿದ್ದ ದೇಶದ ಜನತೆ ಅಧ್ಯಕ್ಷ ಗೊತಬಯ ರಾಜಪಕ್ಸ ಮತ್ತು ಸರಕಾರದ ರಾಜೀನಾಮೆಗೆ ಆಗ್ರಹಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭ ಸರಕಾರದ ಪರ ಮತ್ತು ವಿರೋಧಿ ಗುಂಪುಗಳ ಮಧ್ಯೆ ನಡೆದ ಘರ್ಷಣೆಯಲ್ಲಿ 9 ಮಂದಿ ಮೃತಪಟ್ಟಿದ್ದು ಪರಿಸ್ಥಿತಿ ನಿಯಂತ್ರಿಸಲು ದೇಶದಾದ್ಯಂತ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.