ಆಸ್ಟ್ರೇಲಿಯಾ: ಪ್ರಧಾನಿ ಮಾರಿಸನ್ ಗೆ ಸೋಲು; ಕನ್ಸರ್ವೇಟಿವ್ ಪಕ್ಷದ ಆಡಳಿತ ಅಂತ್ಯ
![ಆಸ್ಟ್ರೇಲಿಯಾ: ಪ್ರಧಾನಿ ಮಾರಿಸನ್ ಗೆ ಸೋಲು; ಕನ್ಸರ್ವೇಟಿವ್ ಪಕ್ಷದ ಆಡಳಿತ ಅಂತ್ಯ ಆಸ್ಟ್ರೇಲಿಯಾ: ಪ್ರಧಾನಿ ಮಾರಿಸನ್ ಗೆ ಸೋಲು; ಕನ್ಸರ್ವೇಟಿವ್ ಪಕ್ಷದ ಆಡಳಿತ ಅಂತ್ಯ](https://www.varthabharati.in/sites/default/files/images/articles/2022/05/21/335994-1653157630.jpeg)
Scott Morrison
ಸಿಡ್ನಿ, ಮೇ 21: ಆಸ್ಟ್ರೇಲಿಯಾದ ರಾಷ್ಟ್ರೀಯ ಚುನಾವಣೆಯಲ್ಲಿ ಪ್ರಧಾನಿ ಸ್ಕಾಟ್ ಮಾರಿಸನ್ ಸೋಲುವುದರೊಂದಿಗೆ ಕನ್ಸರ್ವೇಟಿವ್ ಪಕ್ಷದ ದಶಕಗಳ ಆಡಳಿತ ಅಂತ್ಯವಾಗಿದ್ದು ಲೇಬರ್ ಪಕ್ಷದ ಮುಖಂಡ ಆ್ಯಂಟನಿ ಅಲ್ಬನೆಸ್ ನೂತನ ಪ್ರಧಾನಿಯಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ ಎಂದು ವರದಿಯಾಗಿದೆ .
ಚಲಾವಣೆಯಾದ ಮತಗಳಲ್ಲಿ 50%ದಷ್ಟು ಮತ ಎಣಿಕೆಯ ವೇಳೆ ಮಾರಿಸನ್ ಅವರ ಎದುರಾಳಿ. ಲೇಬರ್ ಪಕ್ಷದ ಮುಖಂಡ ಆ್ಯಂಟನಿ ಅಲ್ಬನೆಸ್ ಆಡಳಿತಾರೂಢ ಮೈತ್ರಿಕೂಟಕ್ಕಿಂತ ಅಧಿಕ ಸ್ಥಾನ ಪಡೆಯುವುದು ಖಚಿತವಾಗಿದೆ . ಬಹುಮತ ಪಡೆಯಲು ಅಗತ್ಯವಾದ 76 ಸ್ಥಾನಗಳನ್ನು ಲೇಬರ್ ಪಕ್ಷ ಗೆಲ್ಲುವುದರಲ್ಲಿ ಸಂದೇಹವಿಲ್ಲ ಎಂದು ಎಬಿಸಿ ಹಾಗೂ ಇತರ ಮಾಧ್ಯಮಗಳು ವರದಿ ಮಾಡಿವೆ.
ಪ್ರಾಕೃತಿಕ ವಿಕೋಪದ ಪರಿಸ್ಥಿತಿ, ಕೋವಿಡ್ ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಮಾರಿಸನ್ ಸರಕಾರ ಎಡವಿದೆ ಎಂದು ವಿಪಕ್ಷಗಳು ಚುನಾವಣೆ ಸಂದರ್ಭ ಪ್ರಚಾರ ಮಾಡಿದ್ದವು. ತಮಗೆ ಹಿನ್ನಡೆಯಾಗಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಶನಿವಾರ ಸೋಲೊಪ್ಪಿಕೊಂಡಿದ್ದಾರೆ. ಇವತ್ತು ಚುನಾವಣಾ ಫಲಿತಾಂಶದ ಬಳಿಕ ನಾನು ವಿಪಕ್ಷಗಳ ಮುಖಂಡ ಹಾಗೂ ಭಾವೀ ಪ್ರಧಾನಿ ಆ್ಯಂಟನಿ ಅಲ್ಬಾನೆಸ್ ಜತೆ ಮಾತಾಡಿದ್ದು ಚುನಾವಣೆಯ ಗೆಲುವಿಗಾಗಿ ಅವರನ್ನು ಅಭಿನಂದಿಸಿದೆ್ದೀನೆ ಎಂದು ಮಾರಿಸನ್ ಹೇಳಿದ್ದಾರೆ.ಮೈತ್ರಿಕೂಟದ ಸರಕಾರದ 3 ವರ್ಷದ ಆಡಳಿತದ ಬಳಿಕ ಚುನಾವಣೆಯಲ್ಲಿ ಸೋಲುಂಡಿದೆ. ಆದರೆ ಮುಂದಿನ 3 ವರ್ಷದ ಬಳಿಕ ಮತ್ತೆ ಮೈತ್ರಿಕೂಟದ ಸರಕಾರ ಸ್ಥಾಪನೆ ತಮ್ಮ ಗುರಿಯಾಗಿದೆ ಎಂದು 54 ವರ್ಷದ ಮಾರಿಸನ್ ಹೇಳಿದ್ದಾರೆ.