ತೈಲ ಟ್ಯಾಂಕರ್ ಗಳಿಗೆ ಬೆದರಿಕೆ: ಶ್ರೀಲಂಕಾ ಇಂಧನ ಸಚಿವರ ಹೇಳಿಕೆ
MINT
ಕೊಲಂಬೊ, ಮೇ 21: ಸಂಘಟಿತ ಗುಂಪುಗಳು ತೈಲ ಸಾಗಾಟದ ಟ್ರಕ್ಗಳಿಗೆ ಬೆದರಿಕೆ ಒಡ್ಡುತ್ತಿರುವ ಬಗ್ಗೆ ವರದಿಯಾಗಿದೆ ಎಂದು ಶ್ರೀಲಂಕಾದ ಇಂಧನ ಸಚಿವ ಕಾಂಚನ ವಿಜೆಶೇಖರ ಹೇಳಿದ್ದಾರೆ.
ಕೆಲವು ಪ್ರದೇಶಗಳ ಮೂಲಕ ತೈಲ ಟ್ಯಾಂಕರ್ಗಳು ಹಾದುಹೋಗುವಾಗ ಅವುಗಳನ್ನು ತಡೆಯುವ ಗುಂಪು, ಚಾಲಕನಿಗೆ ಜೀವ ಬೆದರಿಕೆ ಒಡ್ಡಿ ಟ್ಯಾಂಕರ್ನ ತೈಲವನ್ನು ಬೇರೆ ಕಡೆ ಅನ್ಲೋಡ್ ಮಾಡುವಂತೆ ಬಲವಂತ ಪಡಿಸುತ್ತಿದ್ದಾರೆ. ಇಲ್ಲದಿದ್ದರೆ ಟ್ಯಾಂಕರ್ಗೆ ಬೆಂಕಿ ಹಚ್ಚುವುದಾಗಿ ಬೆದರಿಸುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ತೈಲ ಪೂರೈಕೆಯನ್ನು ಸ್ಥಗಿತಗೊಳಿಸಬೇಕಾಗುತ್ತದೆ ಎಂದವರು ಹೇಳಿದ್ದಾರೆ.
ಈ ಮಧ್ಯೆ, ದೇಶದಲ್ಲಿ ತೈಲವನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನು ತಡೆಯಲು ರವಿವಾರದಿಂದ ದೇಶದೆಲ್ಲೆಡೆ ಪೊಲೀಸರು ದಾಳಿ ಮತ್ತು ಶೋಧ ಕಾರ್ಯಾಚರಣೆ ಬಿಗುಗೊಳಿಸಲಿದ್ದಾರೆ ಎಂದು ಪೊಲೀಸ್ ಇಲಾಖೆಯ ವಕ್ತಾರ ನಿಹಾಲ್ ಥಲ್ದುವಾ ಹೇಳಿದ್ದಾರೆ. ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಷನ್ ಸಿಬಂದಿಗಳ ಸಹಕಾರದೊಂದಿಗೆ ದಾಳಿ ನಡೆಸಲಾಗುತ್ತಿದ್ದು ಸಿಕ್ಕಿಬಿದ್ದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಕ್ಯಾನ್ಗಳಲ್ಲಿ, ಬಾಟಲಿಗಳಲ್ಲಿ ತೈಲ ದಾಸ್ತಾನು ಇಟ್ಟುಕೊಳ್ಳಬಾರದು ಎಂದವರು ದೇಶದ ಜನತೆಗೆ ಮನವಿ ಮಾಡಿದ್ದಾರೆ.